ADVERTISEMENT

ಉತ್ತರ ಗಡಿಗಳ ಮೇಲೆ ಸೇನೆ ನಿಯಂತ್ರಣ: ಲೆ.ಜ.ಕಲಿತಾ

ಪಿಟಿಐ
Published 16 ಡಿಸೆಂಬರ್ 2022, 13:06 IST
Last Updated 16 ಡಿಸೆಂಬರ್ 2022, 13:06 IST
ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ.ಕಲಿತಾ ಅವರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಜಯ ಸ್ಮಾರಕಕ್ಕೆ ಗೌರವ ಸಲ್ಲಿಸಿದರು–ಪಿಟಿಐ ಚಿತ್ರ 
ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ.ಕಲಿತಾ ಅವರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಿಜಯ ಸ್ಮಾರಕಕ್ಕೆ ಗೌರವ ಸಲ್ಲಿಸಿದರು–ಪಿಟಿಐ ಚಿತ್ರ    

ಕೋಲ್ಕತ್ತ : ‘ಉತ್ತರ ಭಾಗದ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ. ಭಾರತೀಯ ಸೇನಾ ಪಡೆಗಳು ಈ‍ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿವೆ’ ಎಂದು ಪೂರ್ವ ಸೇನಾ ಕಮಾಂಡರ್‌, ಲೆಫ್ಟಿನೆಂಟ್‌ ಜನರಲ್‌ ಆರ್‌.ಪಿ.ಕಲಿತಾ ತಿಳಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ 51ನೇ ವಿಜಯ ದಿವಸ ಕಾರ್ಯಕ್ರಮದ ಬಳಿಕ ಅವರುಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆ ಕುರಿತು ಮಾತನಾಡಿದರು.

‘ವಾಸ್ತವ ನಿಯಂತ್ರಣ ರೇಖೆಗಳ (ಎಲ್‌ಎಸಿ) ಕುರಿತು ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ವಿಭಿನ್ನ ಗ್ರಹಿಕೆಗಳನ್ನು ಹೊಂದಿವೆ. ಎಂಟು ಗಡಿ ಪ್ರದೇಶಗಳು ತಮಗೆ ಸೇರಬೇಕೆಂದು ಉಭಯ ಸೇನೆಯವರೂ ಪ್ರತಿಪಾದಿಸುತ್ತಿದ್ದಾರೆ. ಈ ಪೈಕಿ ತವಾಂಗ್‌ ಸೆಕ್ಟರ್‌ ಬಳಿ ಚೀನಾ ಸೈನಿಕರು ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ್ದರು. ಅದನ್ನು ಭಾರತೀಯ ಸೇನೆಯವರು ದಿಟ್ಟತನದಿಂದ ತಡೆದಿದ್ದಾರೆ’ ಎಂದುಕಲಿತಾ ಹೇಳಿದರು.

ADVERTISEMENT

‘ಘರ್ಷಣೆಯಿಂದಾಗಿ ಉಭಯ ಸೇನಾ ಪಡೆಗಳ ಸೈನಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಕಮಾಂಡರ್‌ಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಿದ್ದಾರೆ. ವಿವಾದ ಪರಿಹರಿಸುವ ದಿಸೆಯಲ್ಲಿ ಬುಮ್ಲಾದಲ್ಲಿ ನಿಯೋಗ ಮಟ್ಟದ ‘ಧ್ವಜ ಸಭೆ’ಯೂ ನಡೆಯಲಿದೆ’ ಎಂದರು.

ಚೀನಾವು ಅರುಣಾಚಲ ಪ್ರದೇಶದ ಭೂ ಭಾಗ ಅತಿಕ್ರಮಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ, ‘ಇಲ್ಲ’ ಎಂದು ಉತ್ತರಿಸಿದರು.

‘ಸೈನಿಕರು ಹಾಗೂ ಸೇನಾ ಪಡೆಗಳು ಎಂತಹುದೇ ಪರಿಸ್ಥಿತಿ ಎದುರಾದರೂ ದೇಶ ರಕ್ಷಣೆಗೆ ಮೊದಲ ಆದ್ಯತೆ ನೀಡಲಿವೆ. ಈ ಕಾರ್ಯಕ್ಕೆ ಸದಾ ಸನ್ನದ್ಧರಾಗಿರಲಿವೆ. ದೇಶದ ಪ್ರಾದೇಶಿಕ ಸಮಗ್ರತೆಯನ್ನು ಖಾತರಿಪ‍ಡಿಸಿಕೊಳ್ಳುವುದು ರಕ್ಷಣಾ ಪಡೆಗಳ ಪ್ರಾಥಮಿಕ ಕೆಲಸ. ಹಿಂದಿನ 10 ರಿಂದ 15 ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಅದರಲ್ಲೂ ಮುಖ್ಯವಾಗಿ ಗಡಿ ಭಾಗದ ಪ್ರದೇಶಗಳಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಇದು ರಕ್ಷಣಾ ಪಡೆಗಳ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.