ADVERTISEMENT

ರಕ್ಷಣಾ ಸಹಕಾರ: ಭಾರತ–ಫ್ರಾನ್ಸ್‌ ಮಧ್ಯೆ ಹಲವು ಒಪ್ಪಂದ

ಪಿಟಿಐ
Published 26 ಜನವರಿ 2024, 15:25 IST
Last Updated 26 ಜನವರಿ 2024, 15:25 IST
ವಿನಯ್ ಕ್ವಾತ್ರ (ಎಡ ಭಾಗದಲ್ಲಿ ಇರುವವರು)
ವಿನಯ್ ಕ್ವಾತ್ರ (ಎಡ ಭಾಗದಲ್ಲಿ ಇರುವವರು)   

ನವದೆಹಲಿ: ಸೇನೆ–ಕೈಗಾರಿಕೆಗಳಲ್ಲಿ ಬಳಸುವ ಹಾರ್ಡ್‌ವೇರ್‌ ಮತ್ತು ತಂತ್ರಜ್ಞಾನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಹಾಗೂ ಉತ್ಪಾದನೆಯನ್ನು ಉತ್ತೇಜಿಸುವ ವಿಷಯದಲ್ಲಿ ಸಹಭಾಗಿತ್ವಕ್ಕೆ ಭಾರತ ಮತ್ತು ಫ್ರಾನ್ಸ್‌ ಸಮ್ಮತಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್ ಅವರ ನಡುವೆ ಜೈಪುರದಲ್ಲಿ ಗುರುವಾರ ರಾತ್ರಿ ನಡೆದ  ಸಭೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ರಕ್ಷಣೆ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಪಾಲುದಾರಿಕೆ ಜೊತೆಗೆ, ಬಾಹ್ಯಾಕಾಶ, ಸೈಬರ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಉಭಯ ನಾಯಕರು ಸಮ್ಮತಿಸಿದರು. ಇದೇ ವೇಳೆ, ಹಲವು ಒಪ್ಪಂದಗಳಿಗೂ ಸಹಿ ಹಾಕಲಾಯಿತು’ ಎಂದು ಹೇಳಿದ್ದಾರೆ.

ADVERTISEMENT

‘ಟಾಟಾ ಸಮೂಹ ಹಾಗೂ ಏರ್‌ಬಸ್‌ ಹೆಲಿಕಾಪ್ಟರ್ಸ್‌ ಜಂಟಿಯಾಗಿ ಎಚ್‌–125 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿದವು. ಈ ಹೆಲಿಕಾಪ್ಟರ್‌ಗಳ ತಯಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ದೇಶೀಯವಾಗಿಯೇ ತಯಾರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ರೋಬೊಟಿಕ್ಸ್, ಸ್ವಯಂಚಾಲಿತ ವಾಹನಗಳ ತಯಾರಿಕೆ ಮತ್ತು ಸೈಬರ್‌ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಿಸಲು ಎರಡೂ ದೇಶಗಳು ಸಮ್ಮತಿಸಿದವು’ ಎಂದರು.

‘ಉಪಗ್ರಹಗಳ ಉಡ್ಡಯನದಲ್ಲಿ ಸಹಕಾರ ವಿಸ್ತರಿಸುವುದಕ್ಕೆ ಸಂಬಂಧಿಸಿ ಇಸ್ರೊ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ಫ್ರಾನ್ಸ್‌ನ ಏರಿಯನ್‌ಸ್ಪೇಸ್ ಸಂಸ್ಥೆ ಒಪ್ಪಂದಕ್ಕೆ ಸಹಿ ಹಾಕಿದವು’ ಎಂದು ವಿವರಿಸಿದರು.

ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷ, ವಿಶ್ವದ ಹಲವೆಡೆ ಕಂಡುಬರುತ್ತಿರುವ ಭಯೋತ್ಪಾದಕ ಕೃತ್ಯಗಳು, ಕೆಂಪು ಸಮುದ್ರ ಪ್ರದೇಶದಲ್ಲಿ ಭದ್ರತೆಗೆ ಎದುರಾಗಿರುವ ಸವಾಲುಗಳು ಸೇರಿದಂತೆ ಹಲವು ವಿದ್ಯಮಾನಗಳ ಕುರಿತು ಮೋದಿ ಮತ್ತು ಮ್ಯಾಕ್ರನ್‌ ಚರ್ಚಿಸಿದರು ಎಂದೂ ಅವರು ಮಾಹಿತಿ ನೀಡಿದರು.

ದೆಹಲಿಯಲ್ಲಿ ಥೇಲ್ಸ್‌ ಕಂಪನಿ ಘಟಕ ಸ್ಥಾಪನೆ
ನವದೆಹಲಿ: ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫ್ರಾನ್ಸ್‌ನ ಥೇಲ್ಸ್‌ ಕಂಪನಿಯು ವಾಯುಯಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ನಿರ್ವಹಣೆ ದುರಸ್ತಿ ಹಾಗೂ ಕಾರ್ಯಾಚರಣೆ’ (ಎಂಆರ್‌ಒ) ಘಟಕವನ್ನು ದೆಹಲಿಯಲ್ಲಿ ಸ್ಥಾಪಿಸಲಿದೆ. ‘ಭಾರತದ ರಕ್ಷಣಾ ಮತ್ತು ವಾಯುಯಾನ ಕ್ಷೇತ್ರಕ್ಕೆ ವಿಶ್ವದರ್ಜೆಯ ಸೇವೆಗಳನ್ನು ಒದಗಿಸಬೇಕು ಹಾಗೂ ಈ ಕ್ಷೇತ್ರಗಳ ಆಧುನೀಕರಣಕ್ಕೆ ನೆರವು ಒದಗಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ’ ಎಂದು ಥೇಲ್ಸ್‌ ಇಂಡಿಯಾದ ಉಪಾಧ್ಯಕ್ಷ ಹಾಗೂ ನಿರ್ದೇಶಕ ಆಶಿಶ್ ಸರಾಫ್‌ ಹೇಳಿದ್ದಾರೆ. ‘ನೌಕಾಪಡೆಗಾಗಿ ಭಾರತ 26 ರಫೇಲ್‌ ಯುದ್ಧವಿಮಾನಗಳು ಹಾಗೂ ಸ್ಕಾರ್ಪೀನ್ ಜಲಾಂತರ್ಗಾಮಿಗಳನ್ನು ಖರೀದಿಸುತ್ತಿದೆ. ಈ ಖರೀದಿಯು ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್‌ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸರಾಫ್‌ ‘ರಫೇಲ್‌ ಉತ್ಪಾದಿಸುವ ತಂಡದ ಭಾಗವಾಗಿರುವುದಕ್ಕೆ ಥೇಲ್ಸ್‌ಗೆ ಹೆಮ್ಮೆ ಇದೆ’ ಎಂದಷ್ಟೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.