ADVERTISEMENT

ಕುಲಾಂತರಿ ಸಾಸಿವೆಗೆ ಅನುಮತಿ; ತಳಿ ವಿಜ್ಞಾನಿಗಳಿಗೆ ಅನುಮತಿ ನೀಡಿದ ಕೇಂದ್ರ

ತಳಿ ವಿಜ್ಞಾನಿಗಳಿಗೆ ಅನುಮತಿ ನೀಡಿದ ಕೇಂದ್ರ ಪರಿಸರ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2022, 21:00 IST
Last Updated 27 ಅಕ್ಟೋಬರ್ 2022, 21:00 IST
ಸಾಸಿವೆ
ಸಾಸಿವೆ   

ನವದೆಹಲಿ: ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಹಾಗೂ ಹೆಚ್ಚು ಇಳುವರಿ ನೀಡುವ ಹೈಬ್ರಿಡ್‌ ಕುಲಾಂತರಿ (ಡಿಎಂಎಚ್‌–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದೆ.ಇದುವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ. ಬಿ.ಟಿ ಹತ್ತಿ ನಂತರ ಪರವಾನಗಿ ಪಡೆದ ಎರಡನೇ ವಾಣಿಜ್ಯ ಬೆಳೆಯಾಗಿದೆ.

ಒಂದೆರಡು ವರ್ಷಗಳಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗಾಗಿ ಬೆಳೆಯುವ ಅವಕಾಶ ರೈತರಿಗೆ ದೊರೆಯುವ ನಿರೀಕ್ಷೆ ಇದೆ.

ತಜ್ಞರ ಸಮಿತಿಗಳು ವರ್ಷಗಳ ಕಾಲ ನಡೆಸಿದ ಬಹುಹಂತದ ತಪಾಸಣೆ ಮತ್ತು ಪರಾಮರ್ಶೆಯ ನಂತರ ಇದನ್ನು ಅಭಿವೃದ್ಧಿಪಡಿಸಿದ ದೆಹಲಿ ವಿಶ್ವವಿದ್ಯಾಲಯ ಅಧೀನದ ಬೆಳೆ ಸಸ್ಯಗಳ ಆನುವಂಶಿಕ ಕುಶಲತೆಯ ಕೇಂದ್ರದ ತಳಿ ವಿಜ್ಞಾನಿಗಳಿಗೆ ವಾಣಿಜ್ಯ ಉದ್ದೇಶಕ್ಕೆ ಬೆಳೆಯಲುಕೇಂದ್ರಪರಿಸರ ಸಚಿವಾಲಯ ಅಧೀನದಲ್ಲಿರುವ ಕುಲಾಂತರಿ ನಿಯಂತ್ರಕ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಪರವಾನಗಿ ನೀಡಿದೆ.

ADVERTISEMENT

ಈ ಅನುಮತಿ ನಾಲ್ಕು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆದರೆ, ಈ ಕುಲಾಂತರಿ ಬೆಳೆಯು ಜೇನು ಹುಳುಗಳು ಮತ್ತು ಇತರ ಪರಾಗಸ್ಪರ್ಶ ಕೀಟಗಳ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಪರಿಸರವಾದಿಗಳ ಆತಂಕದ ಹಿನ್ನೆಲೆಯಲ್ಲಿಬೆಳೆಯ ಕಾರ್ಯಕ್ಷಮತೆ ಆಧರಿಸಿ ಎರಡು ವರ್ಷಗಳ ನಂತರ ಅನುಮತಿಯನ್ನು ಮತ್ತೆ ಪರಾಮರ್ಶೆ ಮಾಡಬಹುದಾಗಿದೆ ಎಂದುತಳಿವಿಜ್ಞಾನಿ ದೀಪಕ್ ಪೆಂಟಲ್ ನೇತೃತ್ವದ ತಂಡಕ್ಕೆ ನೀಡಿರುವ ಪರವಾನಗಿ ಪತ್ರದಲ್ಲಿ ಹೇಳಿದೆ.

2002ರಲ್ಲಿ ಹೈಬ್ರಿಡ್ ಡಿಎಂಎಚ್ -11 ಅಭಿವೃದ್ಧಿಪಡಿಸಲಾಗಿದೆ. ಐಸಿಎಆರ್ ನಿಗಾದಲ್ಲಿ ನಡೆಸಿದ ತಾಕುಗಳಮಟ್ಟದ ಪ್ರಯೋಗಗಳಲ್ಲಿ ಡಿಎಂಎಚ್ -11, ವರುಣಾ ತಳಿಗಿಂತ ಶೇ 28ರಷ್ಟು ಹೆಚ್ಚು ಮತ್ತು ಪ್ರಾದೇಶಿಕ ತಳಿಗಳಿಗಿಂತ ಶೇ 37ರಷ್ಟು ಹೆಚ್ಚು ಇಳುವರಿ ನೀಡಿದೆ.

ಪೆಂಟಲ್ ಅವರ ತಂಡವು ಕುಲಾಂತರಿ ಸಾಸಿವೆ ಬೀಜಗಳನ್ನು ಹಲವು ವರ್ಷಗಳ ಕಾಲ ಕ್ಷೇತ್ರ ಪ್ರಯೋಗ ಮಾಡಿ, ಬೆಳೆ ದತ್ತಾಂಶಗಳ ವಿಶ್ಲೇಷಿಸಿತ್ತು. 2017ರಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯಲು ಸರ್ಕಾರದ ಅನುಮತಿ ಪಡೆಯುವುದರಲ್ಲಿತ್ತು. ಆದರೆ,ಕೃಷಿಯಲ್ಲಿ ಕುಲಾಂತರಿ ಬೆಳೆ ತಂತ್ರಜ್ಞಾನ ಬಳಕೆಗೆ ಪರಿಸರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಇದು ನೆನೆಗುದಿಗೆ ಬಿದ್ದಿತ್ತು.

ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸಲು ದೇಶೀಯವಾಗಿ ಎಣ್ಣೆ ಬೀಜ ಉತ್ಪಾದನೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಪದೇ ಪದೇ ಕರೆ ನೀಡುತ್ತಿದ್ದು,2014ರಿಂದಲೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಿತ್ತು.

ಶೇ 70ಕ್ಕಿಂತಲೂ ಹೆಚ್ಚುಖಾದ್ಯ ತೈಲ ಆಮದು

ಭಾರತವು ಖಾದ್ಯ ತೈಲಗಳ ಆಮದಿನಲ್ಲಿ ವಿಶ್ವದಲ್ಲೇ ಅತಿದೊಡ್ಡ ಆಮದುದಾರ ದೇಶವಾಗಿದೆ. ಖಾದ್ಯ ತೈಲಗಳ ಆಮದಿಗೆ ವರ್ಷಕ್ಕೆ ಹತ್ತಾರು ಶತಕೋಟಿ ಡಾಲರ್‌ಗಳನ್ನು ವಿನಿಯೋಗಿಸುತ್ತಿದೆ. ಭಾರತವು ತನ್ನ ಬೇಡಿಕೆಯ ಖಾದ್ಯ ತೈಲದಲ್ಲಿ ಶೇ 70ಕ್ಕಿಂತಲೂ ಹೆಚ್ಚು ಖಾದ್ಯ ತೈಲದ ಆಮದಿಗೆ ಅರ್ಜೆಂಟೀನಾ, ಬ್ರೆಜಿಲ್, ಇಂಡೋನೇಷ್ಯಾ, ಮಲೇಷ್ಯಾ, ರಷ್ಯಾ ಹಾಗೂ ಉಕ್ರೇನ್‌ ಅವಲಂಬಿಸಿದೆ.

ಎರಡು ದಶಕಗಳ ಹಿಂದೆ ವಾಜಪೇಯಿ ನೇತೃತ್ವದ ಸರ್ಕಾರ ಬಿ.ಟಿ ಹತ್ತಿ ಬೆಳೆಯಲು ಅನುಮತಿ ನೀಡಿದ ಪರಿಣಾಮ ಇಂದು ದೇಶದಲ್ಲಿ ಬೆಳೆಯುತ್ತಿರುವ ಹತ್ತಿಯಲ್ಲಿ ಬಿ.ಟಿ ಹತ್ತಿಯ ಪಾಲು ಶೇ 95ರಷ್ಟಿದೆ. 200ರಲ್ಲಿ 13 ದಶಲಕ್ಷ ಬೇಲ್‌ ಇದ್ದ ಹತ್ತಿ ಉತ್ಪಾದನೆ 2021ರ ವೇಳೆಗೆ 35 ದಶಲಕ್ಷ ಬೇಲ್‌ಗೆ ಏರಿಕೆಯಾಗಿದೆ.

****

ತಮ್ಮ ತಂಡದ ವಿಜ್ಞಾನಿಗಳ ಜತೆಗೂಡಿ ಈ ಕುಲಾಂತರಿ ಸಾಸಿವೆ ಬೀಜಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಪರಿಸರ ಅನುಮತಿ ಸಿಕ್ಕಿರುವುದು ಒಂದು ಹೆಗ್ಗುರುತಿನ ಬೆಳವಣಿಗೆ. ಕುಲಾಂತರಿಸಾಸಿವೆಯ ವಾಣಿಜ್ಯ ಬಳಕೆಗೆ ಒಂದೆರಡು ವರ್ಷಗಳು ಬೇಕಾಗಲಿದೆ

– ದೀಪಕ್ ಪೆಂಟಲ್, ದೆಹಲಿ ವಿಶ್ವವಿದ್ಯಾಲಯದ ತಳಿವಿಜ್ಞಾನಿ ಮತ್ತು ವಿಶ್ರಾಂತ ಕುಲಪತಿ

****

‘ಜೀನೋಮ್ ಸಂಪಾದಿತ ಸಸ್ಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ನಿಯಮಗಳನ್ನು ವ್ಯವಸ್ಥಿತಗೊಳಿಸುತ್ತಿದೆ. ಇದರಲ್ಲಿ ಬಹುದೊಡ್ಡ ಆರ್ಥಿಕತೆಗೆ ವಿಪುಲ ಅವಕಾಶಗಳಿರುವುದರಿಂದ ಅಗತ್ಯ ತಂತ್ರಜ್ಞಾನವನ್ನೂ ಒದಗಿಸಲಿದೆ’

– ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

****

ಜಿಇಎಸಿಯ ನಿರ್ಧಾರದಿಂದ ಹೆಚ್ಚುತ್ತಿರುವ ಖಾದ್ಯ ತೈಲ ಆಮದಿನ ಸಮಸ್ಯೆ ಪರಿಹರಿಸಲು ದೇಶದ ಜೈವಿಕ ತಂತ್ರಜ್ಞಾನದ ಸಾಮರ್ಥ್ಯಕ್ಕೆ ಮನ್ನಣೆ ಸಿಕ್ಕಿದೆ

– ಭಗಿರತ್‌ ಚೌಧರಿ,ಎಸ್‌ಎಬಿಸಿ (ಲಾಭೋದ್ದೇಶವಿಲ್ಲದ ದಕ್ಷಿಣ ಏಷ್ಯಾ ಜೈವಿಕ ಕೇಂದ್ರ) ನಿರ್ದೇಶಕ

****

ಪ್ರಮುಖಾಂಶಗಳು

* 2002ರಲ್ಲಿ ಬಿ.ಟಿ ಹತ್ತಿಗೆ ಅನುಮತಿ ನೀಡಿದ ನಂತರ ಈ ವರೆಗೆ ಯಾವುದೇ ಕುಲಾಂತರಿ ಬೆಳೆಗೆ ಅನುಮತಿ ಸಿಕ್ಕಿರಲಿಲ್ಲ

*ಕ್ಷಿಪ್ರ ನಗರೀಕರಣ, ಹವಾಮಾನ ವೈಪರೀತ್ಯ, ಕೃಷಿ ಭೂಮಿ ಕುಗ್ಗುವಿಕೆಯಿಂದ ಕುಲಾಂತರಿ ಬೆಳೆ ಹೆಚ್ಚಿಸಲು ವಿಜ್ಞಾನಿಗಳು, ಕೃಷಿ ತಜ್ಞರು ಸಲಹೆ ನೀಡುತ್ತಿದ್ದಾರೆ

*ಕುಲಾಂತರಿ ಬೆಳೆಗಳು ಆಹಾರ ಸುರಕ್ಷತೆ ಮತ್ತು ಜೀವವೈವಿಧ್ಯತೆಯಲ್ಲಿ ರಾಜಿ ಮಾಡಿಕೊಡಬಹುದು ಮತ್ತು ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎನ್ನುವುದು ಕೆಲವು ಸಂಪ್ರದಾಯಬದ್ಧ ರಾಜಕಾರಣಿಗಳು ಮತ್ತು ಕುಲಾಂತರಿ ಬೆಳೆಗಳ ವಿರೋಧಿಗಳನಿಲುವು

*ಜಿಇಎಸಿ ಪರವಾನಗಿ ನೀಡಿದ ನಿರ್ಧಾರವನ್ನುವಿಜ್ಞಾನಿಗಳು ಸ್ವಾಗತಿಸಿದರೆ, ಟೀಕಾಕಾರರು ಜವಾಬ್ದಾರಿಯುತ ನಿಯಂತ್ರಣದ ಕೊರತೆ ಇದು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.