ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ ದೇಶ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ಕಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಾಜಪೇಯಿ ಅವರ ಐದನೇ ವರ್ಷದ ಪುಣ್ಯತಿಥಿ ಅಂಗವಾಗಿ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ‘ಭಾರತದ 140 ಕೋಟಿ ಜನರ ಪರವಾಗಿ ದೇಶದ ಧೀಮಂತ ನಾಯಕನಿಗೆ ಗೌರವ ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದರು.
‘ಬಿಜೆಪಿಯಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ವಾಜಪೇಯಿ ಅವರು ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ. ಆರು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವಲ್ಲಿಯೂ ಅವರ ಕೊಡುಗೆ ಅಪಾರವಾಗಿದೆ’ ಎಂದರು.
‘ದೇಶದ ಅಭಿವೃದ್ದಿಗೆ ಶ್ರಮಿಸಿದವರಲ್ಲಿ ವಾಜಪೇಯಿ ಕೂಡ ಒಬ್ಬರು. ಅವರ ಆಡಳಿತಾವಧಿಯಲ್ಲಿ ದೇಶದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ‘ ಎಂದು ಹೇಳಿದರು.
1998-2004ರವರೆಗೆ ರಾಷ್ಟ್ರೀಯ ಪ್ರಜಾಸತ್ಪಾತ್ಮಕ ಒಕ್ಕೂಟದ (ಎನ್‌ಡಿಎ) ಸರ್ಕಾರವನ್ನು ಮುನ್ನಡೆಸಿದ ವಾಜಪೇಯಿ, ಮೂರು ಬಾರಿ ದೇಶದ ಪ್ರಧಾನಿಯಾಗಿದ್ದರು. 1996ರಲ್ಲಿ ಮತ್ತು 1998 ರಿಂದ 2004ರ ನಡುವೆ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ವಾಜಪೇಯಿ ಅವರು ಆಗಸ್ಟ್ 16, 2018ರಂದು ವಿಧಿವಶರಾಗಿದ್ದರು. 2014ರಲ್ಲಿ ಅವರಿಗೆ ಭಾರತ ರತ್ನ ದೊರಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.