ನವದೆಹಲಿ: ಗ್ರೀನ್‌ವಿಚ್ ರೇಖಾಂಶಕ್ಕಿಂತ ಮುನ್ನ ಭಾರತವು ತನ್ನದೇ ಆದ ಪ್ರಧಾನ ರೇಖಾಂಶವನ್ನು ಹೊಂದಿತ್ತು. ಅದನ್ನು ‘ಮಧ್ಯರೇಖಾ’ ಎಂದು ಕರೆಯಲಾಗುತ್ತಿತ್ತು. ಅದು ಮಧ್ಯಪ್ರದೇಶದ ಉಜ್ಜಯಿನಿ ನಗರದ ಮೂಲಕ ಹಾದುಹೋಗುತ್ತದೆ ಎಂದು ಎನ್‌ಸಿಇಆರ್‌ಟಿ 6ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
‘ಎಕ್ಸಪ್ಲೋರಿಂಗ್ ಸೊಸೈಟಿ ಇಂಡಿಯಾ ಅಂಡ್ ಬಿಯಾಂಡ್’ ಎಂಬ ಶೀರ್ಷಿಕೆಯ ಪಠ್ಯಪುಸ್ತಕದಲ್ಲಿ ಹರಪ್ಪ ನಾಗರಿಕತೆಯನ್ನು ‘ಸಿಂಧು– ಸರಸ್ವತಿ’ ನಾಗರಿಕತೆ ಎಂದೂ ಕರೆಯಲಾಗಿದೆ. ಜಾತಿ ಆಧಾರಿತ ತಾರತಮ್ಯದ ಬಗ್ಗೆಯೂ ಉಲ್ಲೇಖವಿಲ್ಲ. ಪರಿಷ್ಕರಣೆ ಸಂದರ್ಭದಲ್ಲಿ ಪ್ರಮುಖ ರಾಜವಂಶಗಳ ಪಾಠವನ್ನು ಕೈಬಿಡಲಾಗಿದೆ.
‘ಇತಿಹಾಸ, ಭೌಗೋಳಿಕತೆ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ವಿಭಾಗಗಳನ್ನು ಪುಸ್ತಕದಲ್ಲಿ ಸಂಯೋಜಿಸಲಾಗಿದ್ದು, ಪ್ರಮುಖ ವಿಚಾರಗಳನ್ನು ಕೇಂದ್ರೀಕರಿಸುವ ಮೂಲಕ ಪಠ್ಯವನ್ನು ಕನಿಷ್ಠಗೊಳಿಸಲು ಪ್ರಯತ್ನಿಸಿದ್ದೇವೆ‘ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಸಕ್ಲಾನಿ ಅವರು ಪಠ್ಯದ ಪರಿಚಯಾತ್ಮಕ ಬರಹದಲ್ಲಿ ತಿಳಿಸಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿರುವ ಪ್ರಮುಖ ಉಲ್ಲೇಖಗಳು
* ಗ್ರೀನ್‌ವಿಚ್ ರೇಖಾಂಶ ಮೊದಲ ರೇಖಾಂಶವಲ್ಲ. ವಾಸ್ತವವಾಗಿ ಯುರೋಪ್‌ಗಿಂತ ಹಲವು ಶತಮಾನಗಳ ಮೊದಲು ಭಾರತ ತನ್ನದೇ ಆದ ಅವಿಭಾಜ್ಯ ರೇಖಾಂಶವನ್ನು ಹೊಂದಿತ್ತು. ಅದನ್ನು ‘ಮಧ್ಯರೇಖಾ’ (ಅಥವಾ ಮಧ್ಯರೇಖೆ) ಎಂದು ಕರೆಯಲಾಗುತ್ತಿತ್ತು. ಅದು ಉಜ್ಜಯಿನಿ ನಗರವನ್ನು ಹಾದು ಹೋಗುತ್ತಿತ್ತು. ಉಜ್ಜಯಿನಿ ನಗರವು ಅನೇಕ ಶತಮಾನಗಳಿಂದಲೂ ಖಗೋಳ ವಿಜ್ಞಾನದ ಪ್ರಸಿದ್ಧ ಕೇಂದ್ರವಾಗಿದೆ ಎಂದು ಪಠ್ಯದಲ್ಲಿ ಹೇಳಲಾಗಿದೆ.
ಪ್ರಸಿದ್ಧ ಖಗೋಳಶಾಸ್ತ್ರಜ್ಞರದ ವರಾಹಮಿಹಿರ ಅವರು ಸುಮಾರು 1,500 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದರು. ಭಾರತೀಯ ಖಗೋಳತಜ್ಞರಿಗೆ ಅಕ್ಷಾಂಶ ಮತ್ತು ರೇಖಾಂಶಗಳ ಪರಿಕಲ್ಪನೆ ತಿಳಿದಿತ್ತು. ಅಲ್ಲದೆ ಶೂನ್ಯ ಅಥವಾ ಪ್ರಧಾನ ರೇಖಾಂಶದ ಅಗತ್ಯದ ಬಗ್ಗೆಯೂ ಅವರಿಗೆ ಗೊತ್ತಿತ್ತು. ಭಾರತದ ಎಲ್ಲ ಖಗೋಳಶಾಸ್ತ್ರದ ಪುಸ್ತಕಗಳಲ್ಲಿ ಉಜ್ಜಯಿನಿ ರೇಖಾಂಶದ ಲೆಕ್ಕಾಚಾರಗಳ ಉಲ್ಲೇಖವಿದೆ ಎಂದು ಪಠ್ಯದಲ್ಲಿ ತಿಳಿಸಲಾಗಿದೆ.
* ಭಾರತೀಯ ನಾಗರಿಕತೆಯ ಆರಂಭಕ್ಕೆ ಸಂಬಂಧಿಸಿದ ಅಧ್ಯಾಯದಲ್ಲಿ ಹಲವು ಬಾರಿ ‘ಸರಸ್ವತಿ’ ನದಿಯ ಉಲ್ಲೇಖ ಮಾಡಲಾಗಿದೆ.
* ಹರಪ್ಪ ನಾಗರಿಕತೆಯನ್ನು ‘ಸಿಂಧು– ಸರಸ್ವತಿ’ ನಾಗರಿಕತೆ ಎಂದು ಉಲ್ಲೇಖಿಸಲಾಗಿದ್ದು, ‘ಸರಸ್ವತಿ’ ಜಲಾನಯನ ಪ್ರದೇಶವು ರಾಖಿಗರ್ಹಿ, ಗನ್ವೇರಿವಾಲಾ ಸೇರಿದಂತೆ ಹಲವು ಸಣ್ಣ ನಗರ, ಪಟ್ಟಣಗಳನ್ನು ಒಳಗೊಂಡಿತ್ತು.
* ಸರಸ್ವತಿ ನದಿಯನ್ನು ಭಾರತದಲ್ಲಿ ‘ಘಗ್ಗರ್’ ಹೆಸರಿನಲ್ಲಿ, ಪಾಕಿಸ್ತಾನದಲ್ಲಿ ‘ಹಕ್ರಾ’ ಹೆಸರಿನಲ್ಲಿ ಕರೆಯಲಾಗುತ್ತಿದೆ. ಹೀಗಾಗಿ ಈ ನದಿಗೆ ‘ಘಗ್ಗರ್–ಹಕ್ರಾ’ ಎಂದೂ ಹೆಸರಿದೆ.
* ಜಾತಿ ವ್ಯವಸ್ಥೆಯ ಉಲ್ಲೇಖಿಸದೆ ವೇದಗಳ ವಿವರಗಳನ್ನು ತಿಳಿಸಲಾಗಿದೆ. ಕೃಷಿಕ, ನೇಕಾರ, ಕುಂಬಾರ, ಕಟ್ಟಡ ನಿರ್ಮಾಪಕ, ಬಡಗಿ, ವೈದ್ಯ, ನರ್ತಕರು, ಕ್ಷೌರಿಕ, ಪುರೋಹಿತ ಸೇರಿದಂತೆ ಅನೇಕ ವೃತ್ತಿಗಳನ್ನು ವೈದಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
* ‘ಇಂಡಿಯಾ ದಟ್ ಇಸ್ ಭಾರತ್’ ಎಂಬ ಪಾಠದಲ್ಲಿ ಇಂಡಿಯಾ ಮತ್ತು ಭಾರತ ಹೆಸರುಗಳು ಹೇಗೆ ಬಂದಿವೆ ಎಂಬುದರ ವಿಸ್ತೃತ ವಿವರಣೆ ನೀಡಲಾಗಿದೆ.
ಕೈಬಿಟ್ಟಿರುವ ಮಾಹಿತಿ:
* ಹಿಂದಿನ ಪಠ್ಯಪುಸ್ತಕದಲ್ಲಿ ಕೆಲ ಪುರೋಹಿತರು ಸಮಾಜವನ್ನು ವರ್ಣವ್ಯವಸ್ಥೆ ಆಧಾರದ ಮೇಲೆ ವಿಭಜಿಸಿದ್ದರು. ಶೂದ್ರರು ಯಾವುದೇ ಆಚರಣೆಗಳನ್ನು ಮಾಡುವಂತಿರಲಿಲ್ಲ. ಮಹಿಳೆಯರು ಮತ್ತು ಶೂದ್ರರು ವೇದಗಳನ್ನು ಅಧ್ಯಯಿಸುವಂತಿರಲಿಲ್ಲ. ಹುಟ್ಟಿನ ಆಧಾರದ ಮೇಲೆ ಗುಂಪುಗಳನ್ನು ನಿರ್ಧರಿಸಲಾಗುತ್ತಿತ್ತು ಎಂದು ಹೇಳಲಾಗಿತ್ತು. ಈ ಅಂಶವನ್ನು ಹೊಸ ಪಠ್ಯದಿಂದ ತೆಗೆಯಲಾಗಿದೆ.
* ಹಳೆ ಪಠ್ಯದಲ್ಲಿ ಇದ್ದ ಅಶೋಕ, ಚಂದ್ರಗುಪ್ತ ಮೌರ್ಯ, ಗುಪ್ತರು, ಪಲ್ಲವರು ಮತ್ತು ಚಾಲುಕ್ಯ ರಾಜವಂಶಗಳ ಪಾಠಗಳನ್ನು ತೆಗೆಯಲಾಗಿದೆ.
* ದೆಹಲಿಯ ಮೆಹ್ರೌಲಿಯಲ್ಲಿನ ಕುತುಬ್ ಮಿನಾರ್ ನಿವೇಶನದಲ್ಲಿ ಇರುವ ಕಬ್ಬಿಣದ ಸ್ತಂಭದ ಉಲ್ಲೇಖವನ್ನು ಕೈಬಿಡಲಾಗಿದೆ.
* ಸಾಂಚಿ ಸ್ತೂಪ, ಮಹಾಬಲಿಪುರಂನ ಏಕಶಿಲಾ ದೇವಾಲಯ, ಅಜಂತಾ ಗುಹೆಗಳಲ್ಲಿನ ವರ್ಣಚಿತ್ರಗಳ ಉಲ್ಲೇಖಗಳನ್ನು ತೆಗೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.