ADVERTISEMENT

ಡಿ. 31ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ರದ್ದು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 11:34 IST
Last Updated 21 ಡಿಸೆಂಬರ್ 2020, 11:34 IST
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ
ಏರ್ ಇಂಡಿಯಾ ಸಾಂದರ್ಭಿಕ ಚಿತ್ರ   

ನವದೆಹಲಿ:ಬ್ರಿಟನ್ನಿನಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ನಿನಿಂದ ಭಾರತಕ್ಕೆ ವಿಮಾನಗಳ ಹಾರಾಟವನ್ನು ಡಿಸೆಂಬರ್ 31ರವರೆಗೆ ತಡೆಹಿಡಿಯಲಾಗಿದೆ. ಕೇಂದ್ರ ಸರ್ಕಾರ ಈ ಕುರಿತಂತೆ ಆದೇಶ ಮಾಡಿದ್ದು, ಇತರೆ ಕೆಲ ದೇಶಗಳು ಸಹ ಇದೇ ನಿರ್ಧಾರ ಕೈಗೊಂಡಿದೆ.

"ಬ್ರಿಟನ್ನಿನ ಸದ್ಯದ ಕೊರೋನಾ ಹರಡುವಿಕೆ ಗಮನದಲ್ಲಿಟ್ಟುಕೊಂಡು ಡಿಸೆಂಬರ್ 31ರವರೆಗೆ ಅಲ್ಲಿಂದ ಭಾರತಕ್ಕೆ ಬರುತ್ತಿದ್ದ ಎಲ್ಲ ವಿಮಾನಗಳನ್ನು ರದ್ದು ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಭಾರತದಿಂದ ಬ್ರಿಟನ್ನಿಗೆ ತೆರಳುತ್ತಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ" ಎಂದುಕೇಂದ್ರ ವಿಮಾನಯಾನ ಇಲಾಖೆಯ ಡೈರೆಕ್ಟರ್ ಜನರಲ್ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಈ ನಿಷೇಧವೂ ಬುಧವಾರದಿಂದ ಜಾರಿಗೆ ಬರಲಿದ್ದು, ಅಲ್ಲಿಂದ ಆಗಮಿಸುವ ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿಯೇ ಕೊರೋನಾ ಟೆಸ್ಟ್‌ಗೆ ಒಳಪಡಿಸಲು ನಿರ್ಧರಿಸಲಾಗಿದೆ.

ADVERTISEMENT

ಬ್ರಿಟನ್ನಿನಲ್ಲಿ ರೂಪಾಂತರಗೊಂಡಿರುವ ಹೊಸ ಕೊರೋನಾ ವೈರಸ್ ಪ್ರಭೇದ ಮತ್ತು ಅದರ ರಾಕೆಟ್ ವೇಗದ ಹರಡುವಿಕೆ ಕುರಿತಂತೆ ಚರ್ಚಿಸಲು ಬೆಳಗ್ಗೆ ಕೋವಿಡ್ 19 ಜಂಟಿ ಮೇಲ್ವಿಚಾರಣಾ ಸಮಿತಿ ಸಭೆ ಸೇರಿತ್ತು. ಬ್ರಿಟನ್ನಿನಲ್ಲಿ ಒಂದೇ ದಿನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಿಕೆಯಾದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ರೂಪಾಂತರಗೊಂಡಿರುವ ಹೊಸ ಕೊರೋನಾ ವೈರಸ್ ಸೋಂಕು ಮೊದಲಿನದಕ್ಕಿಂತ ಶೇ 70ಷ್ಟು ಹೆಚ್ಚು ವೇಗವಾಗಿ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸೌದಿ, ಕೆನಡಾ ಮತ್ತು ಯೂರೋಪಿನ ಹಲವು ದೇಶಗಳು ಬ್ರಿಟನ್ನಿನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.