ಕೋಲ್ಕತ್ತಾ: ನಮ್ಮ ದೇಶದಲ್ಲಿ ನೀಗ್ರೊ, – ನಮ್ಮ ದೇಶದಲ್ಲಿ ನೀ.. ಮಾದರಿ, ಮಂಗೋಲಿಯನ್ ಮಾದರಿಯ ವರ್ಗಗಳು ಇವೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಗುರುವಾರ ಹೇಳಿದ್ದಾರೆ.
ಈಶಾನ್ಯ ಭಾರತದವರು ಚೀನಾದವರಂತೆಯೂ, ದಕ್ಷಿಣ ಭಾರತದವರು ಆಫ್ರಿಕನ್ನರ ಹಾಗೆ ಕಾಣಿಸುತ್ತಾರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಬೆನ್ನಲ್ಲೇ, ಅಧೀರ್ ಹೀಗೆ ಮಾತನಾಡಿದ್ದಾರೆ.
ಪಿತ್ರೋಡಾ ಹೇಳಿಕೆ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಒಬ್ಬರ ವೈಯಕ್ತಿಕ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ದೇಶದಲ್ಲಿ ನೀ.., ಮಂಗೋಲಿಯನ್ ಮಾದರಿಯ ವರ್ಗಗಳಿವೆ. ನಮ್ಮ ದೇಶದ ಜನಾಂಗೀಯ ಸ್ಥಿತಿ ಭಿನ್ನವಾಗಿವೆ. ಪ್ರಾದೇಶಿಕ ಲಕ್ಷಣಗಳೂ ವಿಭಿನ್ನವಾಗಿರುತ್ತವೆ. ಇದನ್ನು ನಮ್ಮ ಶಿಕ್ಷಣದಲ್ಲಿಯೇ ಕಲಿಸಲಾಗುತ್ತದೆ. ಕೆಲವರ ಬಣ್ಣ ಬಿಳಿಯಾಗಿದ್ದರೆ ಇನ್ನು ಕೆಲವರದು ಕಪ್ಪು ಇರುತ್ತದೆ. ಅದನ್ನು ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿದ್ದಾರೆ.
‘ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಿದ್ದರೆ, ಪಶ್ಚಿಮದ ರಾಜ್ಯಗಳಲ್ಲಿರುವವರು ಅರಬ್ಬರ ಥರ ಕಾಣುತ್ತಾರೆ. ಅದೇ ರೀತಿ, ಉತ್ತರ ಭಾಗಗಳ ಜನರು ಬಹುಶಃ ಬಿಳಿಯರಂತೆ ಕಂಡರೆ ದಕ್ಷಿಣದಲ್ಲಿರುವವರು ಆಫ್ರಿಕಾದವರಂತೆ ಕಾಣುತ್ತಾರೆ. ಈ ವೈವಿಧ್ಯದ ನಡುವೆಯೂ ನಾವು ಏಕತೆಯನ್ನು ಸಾಧಿಸಿದ್ದೇವೆ’ ಎಂದು ಪಿತ್ರೋಡಾ ಹೇಳಿದ್ದರು.
ಪಿತ್ರೋಡಾ ಅವರ ಈ ಹೇಳಿಕೆ ಕುರಿತು ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿದ್ದವು. ‘ಇಂತಹ ಜನಾಂಗೀಯ ದ್ವೇಷದ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ವಿಭಜಕ ರಾಜಕಾರಣ ಬಹಿರಂಗಗೊಂಡಿದೆ’ ಎಂದು ಬಿಜೆಪಿ ಟೀಕಿಸಿತ್ತು.
ತಾವು ನೀಡಿದ್ದ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ಬುಧವಾರ ರಾಜೀನಾಮೆಯನ್ನೂ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.