ನವದೆಹಲಿ: ಚೀನಾದಲ್ಲಿ ಮಕ್ಕಳಲ್ಲಿ ಕಂಡುಬಂದಿರುವ ಉಸಿರಾಟದ ಸಮಸ್ಯೆ ಹಾಗೂ ಎಚ್9ಎನ್2 (ಏವಿಯನ್ ಇನ್‌ಫ್ಲುಯೆಂಜಾ) ಸೋಂಕು ಪ್ರಕರಣಗಳ ಏರಿಕೆ ಬೆಳವಣಿಗೆಯನ್ನು ಭಾರತ ಸೂಕ್ಷ್ಮ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದೆ.
ಈಗ ಚೀನಾದಲ್ಲಿ ಕಾಣಿಸಿಕೊಂಡಿರುವ ಈ ಎರಡೂ ರೀತಿ ಸೋಂಕುಗಳಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿಕೆ ನೀಡಿದೆ.
ಅಲ್ಲದೆ, ಯಾವುದೇ ರೀತಿಯ ಸೋಂಕಿನಿಂದ ಭಾರತದ ಮೇಲೆ ಆಗುವ ಪರಿಣಾಮಗಳನ್ನು ಎದುರಿಸಲು ಭಾರತ ಸಜ್ಜಾಗಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಕಳೆದ ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟ ಸಮಸ್ಯೆಗಳ ಪ್ರಕರಣ ಏರಿಕೆಯಾಗಿದೆ. ಇದು, ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಯಾವುದೇ ಹೊಸ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಮನುಷ್ಯರಲ್ಲಿ ಎಚ್9ಎನ್2 (ಹಕ್ಕಿಜ್ವರ) ಕಾಣಿಸಿಕೊಂಡಿದ್ದು, ಈ ಸಂಬಂಧ WHOಗೆ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತೆಯಾಗಿ ನವದೆಹಲಿಯಲ್ಲಿ ಪೂರ್ವಭಾವಿ ಸಭೆ ನಡೆದಿದೆ.
WHO ಅಧ್ಯಯನದಂತೆ ಒಬ್ಬರಿಂದ ಒಬ್ಬರಿಗೆ ಈ ಸೋಂಕು ಹರಡುವ ಸಾಧ್ಯತೆಗಳು ಕಡಿಮೆ. ಸಾವಿನ ಪ್ರಮಾಣವೂ ಕಡಿಮೆ. ಮನುಷ್ಯರಲ್ಲಿ ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮತ್ತು ಪಶುಸಂಗೋಪನಾ ವಿಭಾಗಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಒತ್ತು ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಉಸಿರಾಟ ಸಮಸ್ಯೆಗೆ ಸಾಮಾನ್ಯ ಕಾರಣಗಳನ್ನು ಪತ್ತೆಮಾಡಲಾಗಿದೆ. ಆದರೆ, ಅಸಹಜ ಅಥವಾ ಅನಿರೀಕ್ಷಿತ ಸೋಂಕಿನ ಗುಣಲಕ್ಷಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪರಿಸ್ಥಿತಿ ಎದುರಿಸಲು ಸಜ್ಜು
ಸಾರ್ವಜನಿಕ ಅನಾರೋಗ್ಯ ಸ್ಥಿತಿಯನ್ನು ಸಮಗ್ರವಾಗಿ ನಿಭಾಯಿಸಲು ‘ಒನ್ ಹೆಲ್ತ್’ ಚಿಂತನೆಯಡಿ (ಅಂತರ್‌ಶಿಸ್ತೀಯ ಮತ್ತು ವಿವಿಧ ಸಂಸ್ಥೆಗಳ ನಡುವಣ ಸಮನ್ವಯದ ಸಮಗ್ರ ಧೋರಣೆ) ಭಾರತ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯ ಸಚಿವಾಲಯವು ಹೇಳಿದೆ.
ಕೋವಿಡ್–19 ನಂತರ ಇಂತಹ ಪರಿಸ್ಥಿತಿಯನ್ನು
ನಿಭಾಯಿಸುವುದಕ್ಕೆ ಪೂರಕವಾಗಿ ದೇಶದಲ್ಲಿನ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ಬಲಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಭವಿಷ್ಯದಲ್ಲಿನ ಸಾಂಕ್ರಾಮಿಕ, ಆರೋಗ್ಯ ವಿಕೋಪಗಳ ಪರಿಸ್ಥಿತಿ ಎದುರಿಸಲು ಪ್ರಾಥಮಿಕ, ತಾಲ್ಲೂಕು ಮತ್ತು ವಲಯ ಮಟ್ಟದಲ್ಲಿ ಸೌಲಭ್ಯ ಬಲಪಡಿಸಿದ್ದು, ಪಿಎಂ–ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್‌ನಡಿ ಸಾಮರ್ಥ್ಯ ಹೆಚ್ಚಿಸಲಾಗಿದೆ.
ಇದರ ಹೊರತಾಗಿ , ಭಾರತದಲ್ಲಿ ಕಣ್ಗಾವಲು ಹಾಗೂ ಸೋಂಕು ಪತ್ತೆ ಜಾಲವನ್ನು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದಡಿ (ಐಡಿಎಸ್‌ಪಿ) ವ್ಯವಸ್ಥಿತವಾಗಿ ರೂಪಿಸಲಾಗಿದೆ. ತುರ್ತು ಅನಾರೋಗ್ಯ ಕುರಿತ ಯಾವುದೇ ಸವಾಲುಗಳನ್ನು ಎದುರಿಸಲು ಬೇಕಾದ ಪರಿಣತಿಯೂ ಇದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.