ವಿಶ್ವಸಂಸ್ಥೆ/ಜಿನೀವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಜಮ್ಮು– ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
‘ಜಗತ್ತಿನೆಲ್ಲೆಡೆ ವ್ಯಾಪಿಸಿರುವ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿ, ತನ್ನ ಕೈಗಳನ್ನು ರಕ್ತಸಿಕ್ತ ಮಾಡಿಕೊಂಡಿರುವ ದೇಶವೊಂದರ ಮಾತುಗಳಿಗೆ ತಾನು ಗಮನ ಕೊಡುವುದಿಲ್ಲ’ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದೆ.
ಮಂಡಳಿಯ 55ನೇ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಅನುಪಮಾ ಸಿಂಗ್, ತಮಗಿರುವ ‘ಉತ್ತರಿಸುವ ಹಕ್ಕು’ ಚಲಾಯಿಸಿ, ಜಮ್ಮು–ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಟರ್ಕಿ ಮತ್ತು ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ.
‘ಭಾರತದ ಆಂತರಿಕ ವಿಷಯ ಕುರಿತು ಸಭೆಯಲ್ಲಿ ಪ್ರಸ್ತಾಪ ಮಾಡಿರುವ ಟರ್ಕಿಯ ನಡೆ ಕುರಿತು ಭಾರತ ವಿಷಾದಿಸುತ್ತದೆ. ಬರುವ ದಿನಗಳಲ್ಲಿ, ನಮ್ಮ ಆಂತರಿಕ ವಿದ್ಯಮಾನಗಳ ಕುರಿತು ಟರ್ಕಿ ಹೇಳಿಕೆ ನೀಡುವುದಿಲ್ಲ ಎಂಬ ವಿಶ್ವಾಸವನ್ನೂ ಹೊಂದಿದೆ’ ಎಂದು ಅನುಪಮಾ ಸಿಂಗ್ ಹೇಳಿದ್ದಾರೆ.
ಇದೇ ವಿಚಾರವಾಗಿ ಪಾಕಿಸ್ತಾನದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ ಅವರು, ‘ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರಾಯೋಜಿಸುತ್ತಿರುವ, ಆರ್ಥಿಕವಾಗಿ ದಿವಾಳಿಯಾಗಿರುವ ಹಾಗೂ ದೇಶದ ಹಿತಾಸಕ್ತಿ ಕಾಪಾಡದೇ ಜನರೇ ತಮ್ಮ ದೇಶ ಕುರಿತು ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಿಸಿರುವ ರಾಷ್ಟ್ರದ ಮಾತುಗಳಿಗೆ ಭಾರತ ಮಹತ್ವ ನೀಡುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಬಂಧ ಹೇರಿರುವ ಉಗ್ರರಿಗೆ ಆಶ್ರಯ ನೀಡಿ, ಅವರನ್ನು ಪೋಷಿಸುತ್ತಿರುವ ದೇಶವೊಂದು ಪ್ರಜಾತಾಂತ್ರಿಕ ಮೌಲ್ಯಗಳು, ಬಹುತ್ವದ ಬಗ್ಗೆ ಭಾರತಕ್ಕೆ ಬುದ್ಧಿವಾದ ಹೇಳುತ್ತಿರುವುದು ವಿಪರ್ಯಾಸ’ ಎಂದೂ ಅವರು ಚಾಟಿ ಬೀಸಿದ್ದಾರೆ.
ಭಾರತದ ವಿರುದ್ಧ ಸುಳ್ಳು ಅಪಾದನೆ ಮಾಡುವುದಕ್ಕಾಗಿ ಮಾನವ ಹಕ್ಕುಗಳ ಮಂಡಳಿ ಸಭೆಯಂತಹ ವೇದಿಕೆಯನ್ನು ಮತ್ತೊಮ್ಮೆ ದುರ್ಬಳಕೆ ಮಾಡಿಕೊಂಡಿದ್ದು ದುರದೃಷ್ಟಕರ ಎಂದು ಪಾಕಿಸ್ತಾನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.