ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಈ ಮೂಲಕ ಅವರು ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಆರನೇ ಫ್ರೆಂಚ್ ನಾಯಕ ಎನಿಸಿಕೊಳ್ಳಲಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಮ್ಯಾಕ್ರನ್ ಅವರು ಭಾರತದ 75ನೇ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಬರಲಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಮೊದಲು ಭಾರತವು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಆಹ್ವಾನಿಸಿತ್ತು. ಆದರೆ, ಬೈಡನ್ ಅವರು ಜನವರಿಯಲ್ಲಿ ನವದೆಹಲಿಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.
ಬಳಿಕ ಭಾರತವು ಈ ಕಾರ್ಯಕ್ರಮಕ್ಕೆ ಫ್ರಾನ್ಸ್ ಅಧ್ಯಕ್ಷರನ್ನು ಆಹ್ವಾನಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷರ ಕಚೇರಿಯು, ‘ಅಧ್ಯಕ್ಷ ಮ್ಯಾಕ್ರನ್ ಅವರು ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ನವದೆಹಲಿ ಭೇಟಿ ನೀಡಲಿದ್ದಾರೆ’ ಎಂದು ತಿಳಿಸಿದೆ.
ರಕ್ಷಣಾ, ಭದ್ರತೆ, ಶುದ್ಧ ಇಂಧನ, ಹೂಡಿಕೆ ಮತ್ತು ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತಿರುವ ಬೆನ್ನಲ್ಲೇ ಭಾರತದಿಂದ ಈ ಆಹ್ವಾನ ನೀಡಲಾಗಿದೆ.
ಫ್ರಾನ್ಸ್ ರಾಷ್ಟ್ರೀಯ ದಿನದಲ್ಲಿ ಭಾಗಿಯಾಗಿದ್ದ ಮೋದಿ: ಜುಲೈನಲ್ಲಿ ಫ್ರಾನ್ಸ್‌ನ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ನಡೆದಿದ್ದ ‘ಬಾಸ್ಟಿಲ್ ಡೇ ಪರೇಡ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅದೇ ತಿಂಗಳಲ್ಲಿ ಭಾರತದ ರಕ್ಷಣಾ ಸಚಿವಾಲಯವು ಫ್ರಾನ್ಸ್‌ನಿಂದ 26 ರಫೇಲ್ ಜೆಟ್‌ಗಳ ಖರೀದಿಗೆ ಸಮ್ಮತಿ ಸೂಚಿಸಿತ್ತು.
ಭಾರತವು ಪ್ರತಿ ವರ್ಷ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶ್ವದ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ. ಆದರೆ ಕೋವಿಡ್ ಕಾರಣದಿಂದ 2021 ಮತ್ತು 2022ರಲ್ಲಿ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳು ಭಾಗವಹಿಸಲಿಲ್ಲ. 2023ರ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಈಜಿಪ್ಟ್‌ನ ಅಬ್ದೆಲ್ ಫತ್ಹಾ ಎಲ್–ಸಿಸಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.