ನವದೆಹಲಿ: ಶುದ್ಧ ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆ ನಿಟ್ಟಿನಲ್ಲಿ ಜೈವಿಕ ಇಂಧನದ ಜಾಗತಿಕ ಮೈತ್ರಿಕೂಟ ರಚನೆಗೆ ಭಾರತ ಜಿ20ರ ಪ್ರಮುಖ ರಾಷ್ಟ್ರಗಳಿಗೆ ಆಹ್ವಾನ ನೀಡಿದೆ.
ಅಮೆರಿಕ, ಬ್ರೆಜಿಲ್ ಹಾಗೂ ಭಾರತ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಾಗಿರುತ್ತವೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಶೂನ್ಯ ಮಾಲಿನ್ಯದ ಗುರಿಯನ್ನು ತಲುಪಲು ಸಸ್ಯ ಹಾಗೂ ಪ್ರಾಣಿಜನ್ಯ ಜೈವಿಕ ಇಂಧನ ಉತ್ಪಾದನೆಗೆ ಆದ್ಯತೆ ನೀಡಲಿವೆ.
‘ಜಾಗತಿಕ ಜೈವಿಕ ಇಂಧನ ಮೈತ್ರಿಕೂಟವನ್ನು ಇಂದು ಘೋಷಿಸಲಾಗಿದೆ. ಇದರಲ್ಲಿ ಎಲ್ಲಾ ರಾಷ್ಟ್ರಗಳಿಗೂ ಆಹ್ವಾನವಿದೆ’ ಎಂದು ಜಿ20ಯ ಪ್ರಮುಖ ಆರ್ಥಿಕ ಸದೃಢ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನವಿತ್ತರು. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಭೆಯಲ್ಲಿ ಶುದ್ಧ ಹಾಗೂ ಎಲ್ಲರ ಕೈಗೆಟಕುವ ಸೌರ ಇಂಧನ ಕುರಿತ ಮೈತ್ರಿಕೂಟವನ್ನು ಭಾರತ ರಚಿಸಿತ್ತು. ಅದೇ ಮಾದರಿಯಲ್ಲಿ ಜೈವಿಕ ಇಂಧನ ಕುರಿತ ಘೋಷಣೆ ಈ ಬಾರಿ ನಡೆದಿದೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಅಂದಾಜಿನ ಪ್ರಕಾರ 2050ರ ಹೊತ್ತಿಗೆ ಶೂನ್ಯ ಮಾಲಿನ್ಯದ ಗುರಿಯನ್ನು ತಲುಪಬೇಕೆಂದರೆ, 2030ರ ಹೊತ್ತಿಗೆ ಜಾಗತಿಕ ಮಟ್ಟದ ಸುಸ್ಥಿರ ಜೈವಿಕ ಇಂಧನ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗಬೇಕು. 2070ರ ಹೊತ್ತಿಗೆ ಶೂನ್ಯ ಇಂಗಾಲ ಸಾಧಿಸುವ ಗುರಿಯನ್ನು ಭಾರತ ಹೊಂದಿದೆ. ಈ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಜೈವಿಕ ಇಂಧನವನ್ನು ವ್ಯಾಪಕವಾಗಿ ಬಳಸಲು ಮುಂದಾಗಿದೆ. ಹೀಗಾಗಿ ದೇಶವ್ಯಾಪಿ ಪೆಟ್ರೋಲ್‌ಗೆ ಶೇ 20ರಷ್ಟು ಎಥನಾಲ್ ಬೆರೆಸುವ ಯೋಜನೆಗೆ 2025ರಲ್ಲಿ ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಏಷ್ಯಾ ರಾಷ್ಟ್ರಗಳು ಸುಮಾರು 12 ಜೈವಿಕ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿವೆ. ಇದರಿಂದ ವಿವಿಧ ಬೆಳೆಗಳ ತ್ಯಾಜ್ಯ, ಗಿಡಗಳ ತ್ಯಾಜ್ಯ ಹಾಗೂ ನಗರ ಪ್ರದೇಶಗಳ ಘನ ತ್ಯಾಜ್ಯಗಳಿಂದ ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.