ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಮಾಣ ಇಳಿಕೆಯಾಗಿರುವುದರಿಂದ ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ತಿಳಿಸಿದೆ, ಆದರೆ ಪ್ರಯಾಣಿಕರು ಮಾಸ್ಕ್ ಬಳಕೆಯನ್ನು ಮುಂದುವರಿಸುವುದು ಉತ್ತಮ ಎಂದು ಸಲಹೆ ನೀಡಿದೆ.
ಈವರೆಗೆ ವಿಮಾನ ಪ್ರಯಾಣದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು.
ಕೋವಿಡ್ ನಿರ್ವಹಣಾ ಪ್ರತಿಕ್ರಿಯೆಗಳಿಗೆ ಅನುಗುಣವಾಗಿ ಸರ್ಕಾರ ತನ್ನ ನೀತಿಯನ್ನು ಇದೀಗ ಪರಿಷ್ಕರಿಸಿದ್ದು, ನೂತನ ಮಾರ್ಗಸೂಚಿಯನ್ನು ವಿಮಾನಯಾನ ಸಂಸ್ಥೆಗಳಿಗೆ ಕಳುಹಿಸಿಕೊಟ್ಟಿದೆ. ಕೋವಿಡ್‌ನಿಂದ ಎದುರಾಗಬಹುದಾದ ಆತಂಕಗಳ ಹಿನ್ನೆಲೆಯಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಸೂಕ್ತ ಎಂಬ ಮಾಹಿತಿಯನ್ನು ವಿಮಾನ ಪ್ರಯಾಣಿಕರಿಗೆ ನೀಡಬಹುದು. ಆದರೆ ದಂಡ/ಕಾನೂನು ಕ್ರಮ ವಿಧಿಸುವ ಬಗ್ಗೆ ಯಾವುದೇ ಪ್ರಕರಣೆ ನೀಡಬಾರದು ಎಂದು ತಿಳಿಸಲಾಗಿದೆ.
ಒಟ್ಟಾರೆ ಕೋವಿಡ್ ಸೋಂಕಿತರ ಪೈಕಿ ಸದ್ಯ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.02 ಮಟ್ಟಕ್ಕೆ ಇಳಿದಿರುವುದರಿಂದ ಹಾಗೂ ಗುಣಮುಖರಾದವರ ಪ್ರಮಾಣ ಶೇ 98.79ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಸಚಿವಾಲಯ ಈ ಆದೇಶ ಹೊರಡಿಸಿದೆ. ದೇಶದಲ್ಲಿ 4.41 ಕೋಟಿ ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸಾವಿನ ಪ್ರಮಾಣ ಶೇ 1.19ರಷ್ಟು ಮಾತ್ರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.