ನವದೆಹಲಿ: ಭಾರತದಲ್ಲಿನ ಮಾಲ್ದೀವ್ಸ್ ರಾಯಭಾರಿಯನ್ನು ಕರೆಸಿಕೊಂಡ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಮಾಲ್ದೀವ್ಸ್‌ನ ಕೆಲವು ಉಪ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಡಿರುವ ಮಾತುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಉಪ ಸಚಿವರನ್ನು ಮಾಲ್ದೀವ್ಸ್ ಸರ್ಕಾರವು ಭಾನುವಾರ ಅಮಾನತು ಮಾಡಿದೆ.
ಉಪ ಸಚಿವರಾಗಿದ್ದ ಮರಿಯಂ ಶಿವ್ನ, ಮಾಲ್ಶಾ ಶರೀಫ್ ಮತ್ತು ಅಬ್ದುಲ್ಲಾ ಎಂ. ಮಜಿದ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಎಕ್ಸ್ ವೇದಿಕೆಯಲ್ಲಿ ಅಸಭ್ಯವಾದ ಮಾತುಗಳನ್ನು ಆಡಿದ್ದರು. ಮೋದಿ ಅವರು ತಾವು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಕೆಲವು ಚಿತ್ರಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದರು. ಇದು ಲಕ್ಷದ್ವೀಪವನ್ನು ಮಾಲ್ದೀವ್ಸ್‌ಗೆ ಪರ್ಯಾಯ ಎಂಬಂತೆ ಬಿಂಬಿಸುವ ಯತ್ನವೆಂದು ಈ ಮೂವರು ಭಾವಿಸಿದ್ದರು.
ಮಾಲ್ದೀವ್ಸ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು, ಉಪ ಸಚಿವರ ಮಾತುಗಳ ಬಗ್ಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿತ್ತು ಎಂದು ಮೂಲಗಳು ಭಾನುವಾರ ತಿಳಿಸಿದ್ದವು. ಈ ನಡುವೆ, ಮಾಲ್ದೀವ್ಸ್‌ನಲ್ಲಿ ಭಾರತದ ಹೈಕಮಿಷನರ್ ಆಗಿರುವ ಮುನು ಮುಹವ್ವರ್ ಅವರು ಮಾಲ್ದೀವ್ಸ್‌ನ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರ ಜೊತೆ ಪೂರ್ವ ನಿಗದಿತ ಸಭೆ ನಡೆಸಿದ್ದಾರೆ. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಭಾರತದ ರಾಯಭಾರ ಕಚೇರಿಯು ಎಕ್ಸ್ ಮೂಲಕ ತಿಳಿಸಿದೆ.
ಅಮಾನತಿನಲ್ಲಿ ಇರುವ ಉಪ ಸಚಿವರು ಆಡಿರುವ ಮಾತುಗಳು ಸರ್ಕಾರದ ನಿಲುವು ಅಲ್ಲ ಎಂಬುದನ್ನು ಮುನು ಮುಹವ್ವರ್ ಅವರಿಗೆ ಮಾಲ್ದೀವ್ಸ್ ಸರ್ಕಾರವು ಸೋಮವಾರ ಸ್ಪಷ್ಟಪಡಿಸಿದೆ ಎಂದು ಮಾಲ್ದೀವ್ಸ್‌ನ ಮಾಧ್ಯಮವೊಂದು ವರದಿ ಮಾಡಿದೆ.
ಮೂವರು ಉಪ ಸಚಿವರು ಆಡಿದ ಮಾತುಗಳಿಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತದ ಹಲವು ಸೆಲೆಬ್ರಿಟಿಗಳು, ಭಾರತದ ಜನರು ಮಾಲ್ದೀವ್ಸ್‌ನ ಬದಲು ದೇಶಿ ಪ್ರವಾಸಿ ತಾಣಗಳ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ. ವಿವಾದ ಸೃಷ್ಟಿಯಾದ ನಂತರದಲ್ಲಿ ಭಾರತದ ಕೆಲವರು ಮಾಲ್ದೀವ್ಸ್ ಭೇಟಿಯನ್ನು ರದ್ದು ಮಾಡಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
‘ಮಾಲ್ದೀವ್ಸ್ ಸರ್ಕಾರ ಭಾರತದ ಕ್ಷಮೆ ಕೇಳಬೇಕಿತ್ತು’:
‘ಉಪ ಸಚಿವರ ಹೇಳಿಕೆ ಕುರಿತು ಮಾಲ್ದೀವ್ಸ್ ಸರ್ಕಾರವು ಕ್ಷಮೆ ಕೇಳಬೇಕಿತ್ತು, ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕಿತ್ತು’ ಎಂದು ಮಾಲ್ದೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ಭಾರತದ ಪ್ರಧಾನಿ ಕುರಿತು ದೇಶದ ಉಪ ಸಚಿವರು ಆಡಿರುವ ಮಾತುಗಳು ಸ್ವೀಕಾರ್ಹವಲ್ಲ’ ಎಂದಿದ್ದಾರೆ.
‘ಈ ರೀತಿಯ ಘಟನೆ ಎಂದಿಗೂ ಆಗಬಾರದಿತ್ತು. ಈ ಕುರಿತು ಮಾಲ್ದೀವ್ಸ್ ಸರ್ಕಾರವು ಇದಕ್ಕೂ ಮುಂಚೆಯೇ ಪ್ರತಿಕ್ರಿಯಿಸಬೇಕಿತ್ತು ಮತ್ತು ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ವಿಚಾರದಿಂದ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಲು ಬಿಡಬಾರದಿತ್ತು’ ಎಂದಿದ್ದಾರೆ.
ಆಡಳಿತಾರೂಢ ಪಕ್ಷದಲ್ಲಿರುವ ಕೆಲ ತೀವ್ರಗಾಮಿಗಳು ‘ಭಾರತ ಹೊರಹೋಗಲಿ’ ಎಂದು ಕರೆ ನೀಡುತ್ತಿದ್ದಾರೆ. ಆದರೆ, ಸರ್ಕಾರ ನಡೆಸುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು. ಏಕೆಂದರೆ, ಮಾಲ್ದೀವ್ಸ್ ಜನಜೀವನವು ಅವರದ್ದೇ ಜವಾಬ್ದಾರಿಯಾಗಿದೆ. ಈ ರೀತಿಯ ವಿಚಾರಗಳಲ್ಲಿ ಎಚ್ಚರಿಕೆ ಕಾಯ್ದುಕೊಳ್ಳಬೇಕು ಎಂದು ಅದೀಬ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.