ನವದೆಹಲಿ : ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್‌ಬಾತಾರ್‌ನಲ್ಲಿ ಇದೇ 17 ರಿಂದ 31ರವರೆಗೆ 15ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ಭಾನುವಾರ ತಿಳಿಸಿದೆ.
ಭಾರತೀಯ ಸೇನೆಯ 43 ಸೈನಿಕರು ಸಿ–17 ವಿಮಾನದ ಮೂಲಕ ಉಲಾನ್‌ಬತಾರ್‌ಗೆ ತಲುಪಿದ್ದಾರೆ. ಈ ಬಾರಿಯ ಸಮರಾಭ್ಯಾಸಕ್ಕೆ ‘ನೋಮ್ಯಾಡಿಕ್ ಎಲಿಫೆಂಟ್ -23‘ ಎಂದು ನಾಮಕರಣ ಮಾಡಲಾಗಿದೆ.
ಸಕಾರಾತ್ಮಕ ಮಿಲಿಟರಿ ಸಂಬಂಧಗಳನ್ನು ನಿರ್ಮಿಸುವುದು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ಕಾರ್ಯಸಾಧ್ಯತೆ, ಬೋನ್‌ಹೋಮಿ, ಸೌಹಾರ್ದತೆ ಮತ್ತು ಎರಡು ಸೇನೆಗಳ ನಡುವೆ ಸ್ನೇಹವನ್ನು ಅಭಿವೃದ್ಧಿಪಡಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.
ಸಮರಾಭ್ಯಾಸವು ಮುಖ್ಯವಾಗಿ ವಿಶ್ವಸಂಸ್ಥೆಯ ಆದೇಶದ ಮೇರೆಗೆ, ಪರ್ವತ ಭೂಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನೋಮ್ಯಾಡಿಕ್ ಎಲಿಫೆಂಟ್ ಸಮರಾಭ್ಯಾಸ ಮಂಗೋಲಿಯ ಮತ್ತು ಭಾರತ ದೇಶಗಳ ನಡುವೆ ವಾರ್ಷಿಕವಾಗಿ ನಡೆಯುವ ಸಮರಾಭ್ಯಾಸವಾಗಿದೆ. ಕಳೆದ 2019ರ ಅಕ್ಟೋಬರ್‌ನಲ್ಲಿ ಹಿಮಾಚಲ ಪ್ರದೇಶದ ಬಾಕೋಲ್ಹ್ ವಿಶೇಷ ಪಡೆಗಳ ತರಬೇತಿ ಶಾಲೆಯಲ್ಲಿ ಇದನ್ನು ಆಯೋಜಿಸಲಾಗಿತ್ತು.
ಮಂಗೋಲಿಯನ್ ಸೇನಾ ಪಡೆಯ 084 ಘಟಕದ ಸೈನಿಕರು ಹಾಗೂ ಜಮ್ಮು ಮತ್ತು ಕಾಶ್ಮೀರದ ಲಘು ಪದಾತಿ ದಳ ಈ ವ್ಯಾಯಾಮದಲ್ಲಿ ಭಾಗವಹಿಸಲಿವೆ ಎಂದು ಸಚಿವಾಲಯ ತಿಳಿಸಿದೆ.
ಸಹಿಷ್ಣುತೆ ತರಬೇತಿ, ಗುಂಡಿನ ಪ್ರತಿಫಲನ ಬಗ್ಗೆ ಮಾಹಿತಿ, ಕೋಣೆಯ ಮಧ್ಯಸ್ಥಿಕೆ, ಸಣ್ಣ ತಂಡದ ತಂತ್ರಗಳು ಮತ್ತು ರಾಕ್ ಕ್ರಾಫ್ಟ್ ತರಬೇತಿಯನ್ನು ಈ ಸಮರಾಭ್ಯಾಸ ಒಳಗೊಂಡಿದೆ. ಜತೆಗೆ ಎರಡೂ ಸೇನೆಗಳು ಪರಸ್ಪರ ನಡೆಸಿದ ಕಾರ್ಯಾಚರಣೆಯ ಅನುಭವದ ಮೂಲಕ ಹೊಸ ತಂತ್ರಗಳನ್ನು ಕಲಿಯಲಿದ್ದಾರೆ.
ಉಭಯ ದೇಶಗಳ ನೋಮ್ಯಾಡಿಕ್ ಎಲಿಫೆಂಟ್–23 ಸಮರಾಭ್ಯಾಸ ಭದ್ರತಾ ಸಹಭಾಗಿತ್ವದಲ್ಲಿ ಮಹತ್ವದ ಘಟ್ಟವಾಗಲಿದೆ ಅಲ್ಲದೆ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.