ADVERTISEMENT

ಹವಾಮಾನ ಬದಲಾವಣೆ ನಿಭಾಯಿಸಲು ಶಾಶ್ವತ ಆಯೋಗ ಬೇಕಿದೆ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 14:35 IST
Last Updated 13 ಜುಲೈ 2024, 14:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಹವಾಮಾನ ಬದಲಾವಣೆಯು ಸದ್ಯದ ಗಂಭೀರ ಬೆದರಿಕೆಯಾಗಿದೆ. ಈ ಸಮಸ್ಯೆಗೆ ಸಮಗ್ರವಾದ ಪರಿಹಾರ ಕಂಡುಹಿಡಿಯಲು ನೀತಿ ಆಯೋಗದಂತೆಯೇ ದೇಶದಲ್ಲಿ ಶಾಶ್ವತ ಆಯೋಗವೊಂದನ್ನು ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಶುಕ್ರವಾರ ಹೇಳಿದ್ದಾರೆ.

ವಕೀಲ ಜತೀಂದರ್ (ಜೇ) ಚೀಮಾ ಅವರ ‘ಹವಾಮಾನ ಬದಲಾವಣೆ: ನೀತಿ, ಕಾನೂನು ಮತ್ತು ಅಭ್ಯಾಸ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹವಾಮಾನ ಬದಲಾವಣೆಯು ಈ ಹೊತ್ತಿನ ಸಮಸ್ಯೆಯಾಗಿದೆ. ಇದು ಯಾವುದೇ ಮುನ್ಸೂಚನೆ ನೀಡದ, ಅತಿಶಯೋಕ್ತಿ ಅಲ್ಲದ ಗಂಭೀರವಾದ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದರು. 

ADVERTISEMENT

‘ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ನಮ್ಮ ದೇಶಕ್ಕೆ ನೀತಿ ಆಯೋಗದ ಮಾದರಿಯಲ್ಲೇ ಶಾಶ್ವತವಾದ ಆಯೋಗದ ಅಗತ್ಯತೆ ಬಗ್ಗೆ ತಜ್ಞರು ಕೂಡ ಚರ್ಚಿಸುತ್ತಿದ್ದಾರೆ. ಚೀಮಾ ಅವರು ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಭಾಗಿದಾರರು ನಿಯಮಿತವಾಗಿ, ಎಲ್ಲ ಆಯಾಮಗಳಿಂದಲೂ ಚರ್ಚಿಸುತ್ತಿದ್ದಾರೆ. ನಮ್ಮ ದೇಶವು ಅಳವಡಿಸಿಕೊಳ್ಳಬೇಕಾದ ಹವಾಮಾನ ಬದಲಾವಣೆಯ ಶಾಸನದ ಚೌಕಟ್ಟಿನ ಬಗ್ಗೆಯೂ ತಜ್ಞರ ನಡುವೆ ತೀವ್ರ ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.

‘ಕಳೆದ ವಾರದಲ್ಲಿ, ಈ ಶಾಸನದ ಸ್ವರೂಪದ ಬಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಎರಡು ಸಂಪಾದಕೀಯ ಪ್ರಕಟವಾಗಿವೆ. ಅಭಿವೃದ್ಧಿ ಹೊಂದಿದ ಕೆಲವು ದೇಶಗಳು ಇಂಗಾಲದ ಹೊರಸೂಸುವಿಕೆ ನಿಯಂತ್ರಿಸುವುದರ ಮೇಲೆ ಮಾತ್ರ ಗಮನಹರಿಸಲು ತಮ್ಮ ಕಾನೂನುಗಳನ್ನು ಹೇಗೆ ರಚಿಸುತ್ತವೆ ಎಂಬುದರ ವಿಶ್ಲೇಷಣೆ ನಡೆದಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಆ ಮಾದರಿಯಂತು ಸೂಕ್ತವಲ್ಲ’ ಎಂದು ಹೇಳಿದರು.

‘ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಕಾಯ್ದುಕೊಳ್ಳಬೇಕಾದ ಸೂಕ್ಷ್ಮ ಸಮತೋಲನವನ್ನು ಸುಪ್ರೀಂ ಕೋರ್ಟ್ ಆಗಾಗ್ಗೆ ಹೇಳುತ್ತಾ ಬಂದಿದೆ. ಪರಿಸರ ನಾಶ ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳ ವ್ಯಾಪ್ತಿಯನ್ನು ಮೀರಿ ಸುಪ್ರೀಂ ಕೋರ್ಟ್‌ ಜವಾಬ್ದಾರಿಯನ್ನು ನಿರ್ವಹಿಸಿದೆ. ಸಂಸತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಮತ್ತು ಅಗತ್ಯ ಶಾಸನಾತ್ಮಕ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಮುಂದೆ ಬರಬೇಕೆಂಬುದು ನಮ್ಮ ಬಯಕೆಯಾಗಿದೆ’ ಎಂದು ‌ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ನ್ಯಾಯಮೂರ್ತಿ ಸಂಜಯ್ ಕರೋಲ್ ಮಾತನಾಡಿ, ‘ಹವಾಮಾನ ಬದಲಾವಣೆಗೆ ಸಂಬಂಧಿಸಿ ಕಾನೂನು ಇಲಾಖೆಯಲ್ಲಿ ಸ್ವತಂತ್ರವಾದ ಶಾಖೆ ಅಗತ್ಯವಿದೆ. ಪರಿಸರ ಕಾನೂನುಗಳು, ಹವಾಮಾನ ಬದಲಾವಣೆಯ ಪರಿಣಾಮ, ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿರುವ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಇಂದಿನ ಅಗತ್ಯ’ ಎಂದರು.

ಎನ್‌ಜಿಒಗಳಾದ ಜರ್ಮನ್‌ವಾಚ್, ನ್ಯೂ ಕ್ಲೈಮೇಟ್ ಇನ್‌ಸ್ಟಿಟ್ಯೂಟ್ ಮತ್ತು ಕ್ಲೈಮೇಟ್ ಆಕ್ಷನ್ ನೆಟ್‌ವರ್ಕ್ 2023ರಲ್ಲಿ ಪ್ರಕಟಿಸಿದ ಹವಾಮಾನ ಬದಲಾವಣೆಯ ಕಾರ್ಯಕ್ಷಮತೆ ಸೂಚ್ಯಂಕ (ಸಿಸಿಪಿಐ) ವರದಿಯಲ್ಲಿ ಭಾರತವು 63 ದೇಶಗಳ ಪೈಕಿ ಎಂಟನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.