ನವದೆಹಲಿ: ರಾಷ್ಟ್ರೀಯ ಸಾಮಾಜಿಕ ನೋಂದಣಿ ಪರಿಕಲ್ಪನೆಯ ಟಿಪ್ಪಣಿಯನ್ನು 2015ರ ನವೆಂಬರ್ 27ರಂದು ಆಗ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಆರ್ಥಿಕ ಸಲಹೆಗಾರರಾಗಿದ್ದ ಮನೋರಂಜನ್ ಕುಮಾರ್ ಸಿದ್ಧಪಡಿಸಿದ್ದರು. ದೇಶದ ಕಡು ಬಡವರಿಗೆ ಸರ್ಕಾರದ ಸೌಲಭ್ಯಗಳ ನೀಡಿಕೆಯನ್ನು ಪಾರದರ್ಶಕಗೊಳಿಸುವ ಮತ್ತು ಸರ್ಕಾರದ ಕಾರ್ಯಕ್ರಮಗಳ ಪರಿಣಾಮಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಯುಗಪ್ರವರ್ತಕ ವಿಧಾನ ಇದು ಎಂದು ಅವರು ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದರು.
ಕುಮಾರ್ ಅವರು ಆಗ ಕನಸು ಕಂಡಿದ್ದ ಸಾಮಾಜಿಕ ನೋಂದಣಿಯು ಈಗ, ಐದು ವರ್ಷಗಳ ಬಳಿಕ ಪೂರ್ಣಗೊಳ್ಳುವುದರ ಸನಿಹಕ್ಕೆ ಬಂದಿದೆ. ಆದರೆ, ಒಳ್ಳೆಯ ಉದ್ದೇಶದಿಂದ ರೂಪಿಸಿದ ವ್ಯವಸ್ಥೆಯು 120 ಕೋಟಿ ಪೌರರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಮೊಟಕು ಮಾಡಬಹುದು ಎಂಬ ಭಯ ಕುಮಾರ್ ಅವರಲ್ಲಿ ಇದೆ.
ಸಾಮಾಜಿಕ ನೋಂದಣಿ ಎಂಬುದು ಬೃಹತ್ ದತ್ತಾಂಶ ಕೋಶವಾಗಲಿದೆ. ಆಧಾರ್ ಸಂಖ್ಯೆಯನ್ನು ಇರಿಸಿಕೊಂಡು ದೇಶದ 120 ಕೋಟಿ ಜನರ ಜೀವನದ ಎಲ್ಲ ಆಗು–ಹೋಗುಗಳ ಮೇಲೆ ನಿಗಾ ಇರಿಸುವ ಡೇಟಾಬೇಸ್‌ಗಳ ಡೇಟಾಬೇಸ್ ಇದು ಎಂದು ಆಡಳಿತ ಸಂಶೋಧಕ ಶ್ರೀನಿವಾಸ್ ಕೊಡಲಿ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ದಾಖಲೆಗಳು ಹೇಳುತ್ತವೆ.
ಹಫ್‌ಪೋಸ್ಟ್ ಇಂಡಿಯಾದ ವರದಿ ಹೀಗಿದೆ: ವ್ಯಕ್ತಿಯು ನಗರದಿಂದ ನಗರಕ್ಕೆ ಹೋದರೆ, ಕೆಲಸ ಬದಲಾಯಿಸಿದರೆ, ಹೊಸ ಆಸ್ತಿ ಖರೀದಿಸಿದರೆ, ಮನೆಯಲ್ಲಿ ಮಗು ಜನಿಸಿದರೆ, ಯಾರೋ ಮೃತಪಟ್ಟರೆ ಅಥವಾ ಯಾರಿಗೋ ಮದುವೆಯಾದರೆ, ಮದುವೆಯಾದ ವ್ಯಕ್ತಿ ಗಂಡ/ಹೆಂಡತಿಯ ಮನೆಗೆ ವಾಸ್ತವ್ಯ ಬದಲಾಯಿಸಿದರೆ... ಇಂತಹ ಎಲ್ಲವುಗಳ ಮೇಲೆಯೂ ಸಾಮಾಜಿಕ ನೋಂದಣಿಯು ನಿಗಾ ಇರಿಸುತ್ತದೆ. ವ್ಯಕ್ತಿಯ ಧರ್ಮ, ಜಾತಿ, ಆದಾಯ, ಆಸ್ತಿ, ಶಿಕ್ಷಣ, ವೈವಾಹಿಕ ಸ್ಥಿತಿ, ಉದ್ಯೋಗ, ಮತ್ತು ವಂಶವೃಕ್ಷ ಎಲ್ಲವನ್ನೂ ಆಧಾರ್ ಸಂಖ್ಯೆ ಇರಿಸಿಕೊಂಡು ಸೃಷ್ಟಿಸಲಾಗುತ್ತದೆ.
‘ಸರ್ಕಾರದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಕ್ಷಮತೆಯಲ್ಲಿ ಪಾರದರ್ಶಕತೆ ತರುವುದು ನನಗೆ ಬೇಕಿತ್ತು. ಆ ದಿಸೆಯಲ್ಲಿ ಸಾಮಾಜಿಕ ನೋಂದಣಿ ವ್ಯವಸ್ಥೆಯು ರೂಪುಗೊಳ್ಳಬೇಕು ಎಂಬುದು ನನ್ನ ಇಚ್ಛೆಯಾಗಿತ್ತು’ ಎಂದು ಹಫ್‌ಪೋಸ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕುಮಾರ್ ಹೇಳಿದ್ದಾರೆ. 2019ರಲ್ಲಿ ನಿವೃತ್ತರಾದ ಬಳಿಕ ಅವರು ಸಾರ್ವಜನಿಕವಾಗಿ ನೀಡಿದ ಮೊದಲ ಪ್ರತಿಕ್ರಿಯೆ ಇದು. ‘ಗ್ರಾಮೀಣ ಭಾಗದ ಕೆಲವು ಯೋಜನೆಗಳ ಯಶಸ್ಸಿನ ಬಗ್ಗೆ ಕೆಲವು ಇಲಾಖೆಗಳು ಮತ್ತು ಅಧಿಕಾರಿಗಳು ಉತ್ಪ್ರೇಕ್ಷೆ ಮಾಡಿದ್ದನ್ನು ನಾನು ನೋಡಿದ್ದೆ. ಇದಕ್ಕೆ ತಡೆ ಒಡ್ಡಿ, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ನಿಖರ ದತ್ತಾಂಶ ಸಾಮಾಜಿಕ ನೋಂದಣಿಯಲ್ಲಿ ದೊರೆಯಬಹುದು ಎಂದು ಭಾವಿಸಿದ್ದೆ’ ಎಂದು ಕುಮಾರ್ ಹೇಳಿದ್ದಾರೆ.
ಆದರೆ, ಈಗ ಸಾಮಾಜಿಕ ನೋಂದಣಿ ಜಾರಿಯಾದರೆ, ಭಾರತವು ಪೊಲೀಸ್ ರಾಜ್ಯವಾಗುವ ಆತಂಕಕರ ಬೆಳವಣಿಗೆಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂಬುದು ಸಾಮಾಜಿಕ ನೋಂದಣಿಯ ಅಂತಿಮ ಸ್ವರೂಪವನ್ನು ನೋಡಿದಾಗ ಮನವರಿಕೆ ಆಗಿದೆ ಎಂದು ಕುಮಾರ್ ವಿವರಿಸುತ್ತಾರೆ.
ದತ್ತಾಂಶ ಆಧಾರಿತ ಆಳ್ವಿಕೆಯ ಪ್ರಬಲ ಪ್ರತಿಪಾದನೆಯಿಂದ ಮಾಹಿತಿ ಕೇಂದ್ರೀಕರಣವು ಸೃಷ್ಟಿಸಬಲ್ಲ ನಾಶದ ಬಗೆಗಿನ ಆತಂಕದತ್ತ ಕುಮಾರ್ ಅವರ ಯೋಚನೆಯು ಸಾಗಿದೆ. ವಿಸ್ತೃತವಾದ ನೀತಿ ನಿರ್ದೇಶನಗಳನ್ನು ಸಣ್ಣ ಸಣ್ಣ ಕಾರ್ಯಕ್ರಮಗಳಾಗಿ ವಿಂಗಡಿಸುವ ಭಾರತದ ಅಧಿಕಾರಶಾಹಿಗೆ, ಭಾರತ ಸರ್ಕಾರವು ಹೊಸದಾಗಿ ಕೈಗೆತ್ತಿಕೊಂಡಿರುವ ಭಾರಿ ದತ್ತಾಂಶ ಯೋಜನೆಯ ಪರಿಣಾಮಗಳು ಮನವರಿಕೆ ಆಗಿರುವುದಿಲ್ಲ.
‘ಭಾರತವು ಪೊಲೀಸ್ ರಾಜ್ಯವಾಗಿ ಪರಿವರ್ತನೆ ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಯಾವುದೇ ದೇಶವು ಅಭಿವೃದ್ಧಿ ಹೊಂದಬೇಕಾದರೆ ಜನರು ಮತ್ತು ಉದ್ಯಮಕ್ಕೆ ಹೆಚ್ಚು ಹೆಚ್ಚು ಸ್ವಾತಂತ್ರ್ಯ ನೀಡಿ, ಕಡಿಮೆ ನಿಯಂತ್ರಣಗಳನ್ನು ಹೇರಬೇಕು ಎಂಬುದು ನನ್ನ ಅತ್ಯಂತ ಸರಳ ನಂಬಿಕೆ’ ಎಂದಿದ್ದಾರೆ ಕುಮಾರ್.
‘ದುರದೃಷ್ಟವೆಂದರೆ, ನಾವು ಈಗ ಸರ್ಕಾರದ ಎಲ್ಲ ಸಂಘಟನೆಗಳು, ಅರೆ ಸರ್ಕಾರಿ ಸಂಘಟನೆಗಳನ್ನು ಕಣ್ಗಾವಲು ಏಜೆಂಟ್‌ಗಳಾಗಿ ಪರಿವರ್ತಿಸಿದ್ದೇವೆ. ವಿಮಾ ನಿಯಂತ್ರಣ ಇರಲಿ, ಬ್ಯಾಂಕಿಂಗ್, ತೆರಿಗೆ ಅಥವಾ ಆಸ್ತಿ ನೋಂದಣಿ ಏನೇ ಇರಲಿ, ಎಲ್ಲೆಡೆಯೂ ಜನರನ್ನು ಅಪರಾಧಿಗಳೋ ಎಂಬ ಅನುಮಾನದಿಂದಲೇ ನೋಡಲಾಗುತ್ತದೆ. ಜನರು ಮತ್ತು ಉದ್ಯಮ ಕ್ಷೇತ್ರಕ್ಕೆ ಇರುವ ಸ್ವಾತಂತ್ರ್ಯ ಕಿರಿದಾಗುತ್ತಲೇ ಇದೆ’ ಎಂಬುದು ಕುಮಾರ್ ಅವರ ಕಳವಳ.
ಭಾರತ ಸರ್ಕಾರವು ಬಡತನ ನಿರ್ಮೂಲನೆಯನ್ನು ನೋಡುವ ವಿಧಾನದಲ್ಲಿಯೇ ಪಲ್ಲಟವಾಗಿದೆ ಎಂಬುದನ್ನು ಸಾಮಾಜಿಕ ನೋಂದಣಿಯಂತಹ ಭಾರಿ ದತ್ತಾಂಶಗಳಿಗೆ ನೀಡುತ್ತಿರುವ ಒತ್ತು ತೋರಿಸುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಂತಹ ಜೀವನೋಪಾಯ ಯೋಜನೆಗಳು, ಸರ್ವ ಶಿಕ್ಷಣ ಅಭಿಯಾನ, ಆಹಾರದ ಹಕ್ಕು ಕಾಯ್ದೆಯಂತಹ ವಿಚಾರಗಳು 2000ನೇ ದಶಕವನ್ನು ರೂಪಿಸಿವೆ. ಇಂತಹ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೇ ದೊರೆಯಬೇಕು ಎಂಬುದನ್ನು ಖಾತರಿಪಡಿಸುವುದು ಅದಕ್ಕಿಂತ ಹಿಂದಿನ ದಶಕದ ಮುಖ್ಯ ತುಡಿತವಾಗಿತ್ತು.
ಈ ತುಡಿತವೇ ರಾಷ್ಟ್ರೀಯ ಸಾಮಾಜಿಕ ನೋಂದಣಿಯಂತಹ ಭಯಾನಕ ಸ್ಥಿತಿಗೆ ತಲುಪಿದೆ ಎಂದು ಈ ಕ್ಷೇತ್ರದ ಪರಿಣತರಲ್ಲಿ ಕೆಲವರು ಹೇಳುತ್ತಾರೆ. ಸರ್ಕಾರದ ಸೌಲಭ್ಯಗಳು ಅತ್ಯಂತ ದಕ್ಷವಾಗಿ ಜನರಿಗೆ ತಲುಪಬೇಕು ಎಂಬುದನ್ನು ಮುಂದಿಟ್ಟು ಪ್ರತಿ ಭಾರತೀಯನ ಮೇಲೆ ಅತ್ಯಂತ ಕೆಳ ಹಂತದಲ್ಲಿ ಕೂಡ ಇರಿಸುವ ಕಣ್ಗಾವಲನ್ನು ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ.
‘ಆಧಾರ್‌ಗೆ ಜೋಡಣೆಯಾಗಿರುವ ಎಲ್ಲ ಮಾಹಿತಿಯು ವಿವಿಧೆಡೆ ಈಗ ಲಭ್ಯವಿವೆ. ಇವೆಲ್ಲವನ್ನೂ ಒಂದೆಡೆ ತರುವ ಸಾಫ್ಟ್‌ವೇರ್ ಒಂದನ್ನು ಒಬ್ಬರು ರೂಪಿಸಿದರೆ ಎಲ್ಲ ಮಾಹಿತಿಯನ್ನು ಒಂದೇ ಕಡೆ ಜೋಡಿಸುವುದು ಸಾಧ್ಯವಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’ ಎಂದು ಹಫ್‌ಪೋಸ್ಟ್ ಸಂದರ್ಶನದಲ್ಲಿ ಕುಮಾರ್ ವಿವರಿಸಿದ್ದಾರೆ.
‘ನೇರವಾಗಿ ಫಲಾನುಭವಿಯನ್ನು ತಲುಪುವುದು ಎಂಬುದರಲ್ಲಿ ಗಮನ ಹರಿಸಬೇಕಾದ ಎರಡು ವಿಚಾರಗಳಿವೆ. ಒಂದು, ಸೌಲಭ್ಯಗಳನ್ನು ನೀಡುವುದು ಎಂಬುದೇ ಪೌರರಾಗಿ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಇತ್ಯಾದಿಗಳು ನಮ್ಮ ಹಕ್ಕು ಎಂಬ ಮನೋಭಾವದಿಂದ ನಮ್ಮನ್ನು ದೂರ ಒಯ್ಯುತ್ತವೆ. ಸೌಲಭ್ಯ ನೀಡಿಕೆಯ ದಕ್ಷತೆಯೇ ಇಲ್ಲಿ ಮುಖ್ಯವಾಗಿಬಿಡುತ್ತದೆ’ ಎಂದು ಅಹಮದಾಬಾದ್ ಐಐಎಂನ ಸಹ ಪ್ರಾಧ್ಯಾಪಕಿ ರೀತಿಕಾ ಖೇರ್ ಹೇಳುತ್ತಾರೆ.
‘ಎರಡನೆಯದು, ಆಧಾರ್‌ನ ಪ್ರತಿಪಾದಕರು ಹೇಳುವ ‘ನೇರ ತಲುಪುವಿಕೆ’ ಎಂಬುದು ಮೋಸವೂ ಆಗಬಹುದು. ನೇರ ತಲುಪುವಿಕೆ ಎಂದರೆ, ಡೇಟಾಬೇಸ್ ಜತೆಗೆ ಕಲ್ಯಾಣ ಕಾರ್ಯಕ್ರಮದ ಜೋಡಣೆ. ಕಲ್ಯಾಣ ಕಾರ್ಯಕ್ರಮದ ಮೇಲಿನ ನಿಗಾ ಅಥವಾ ‘ಸಾಮಾಜಿಕ ನೋಂದಣಿ’ ಎಂಬುದು ಕೂಡ ಕಣ್ಗಾವಲೇ ಆಗಿದೆ. ಡೇಟಾಬೇಸ್‌ಗಳನ್ನು ಜೋಡಿಸಲಾಗುವುದು ಎಂಬ ವಿಚಾರವನ್ನು ಸ್ಪಷ್ಟವಾಗಿ ಎಂದೂ ಹೇಳಿಯೇ ಇಲ್ಲ. ಅರ್ಹ ಫಲಾನುಭವಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ ಎಂಬುದನ್ನು ಬಯೊಮೆಟ್ರಿಕ್ ದೃಢೀಕರಣವು ಖಚಿತಪಡಿಸುತ್ತದೆ ಎಂಬ ಭಾವನೆಯನ್ನೇ ಮೂಡಿಸಲಾಗಿದೆ. ಕಣ್ಗಾವಲಿನ ಬಗ್ಗೆ ಜನರಲ್ಲಿ ಇರುವ ಭೀತಿಯನ್ನು ದೂರ ಮಾಡುವುದಕ್ಕಾಗಿಯೇ ಈ ದ್ವಂದ್ವ ನೀತಿ’ ಎಂದು ಖೇರ್ ವಿವರಿಸುತ್ತಾರೆ.
ಲಭ್ಯ ದಾಖಲೆಗಳ ಪ್ರಕಾರ ಹೇಳುವುದಾದರೆ, ಒಂದು ಕಾಲದಲ್ಲಿ ಮನೋರಂಜನ್ ಕುಮಾರ್ ಅವರು ಸಾಮಾಜಿಕ ನೋಂದಣಿಯ ಪ್ರಬಲ ಪ್ರತಿಪಾದಕರಾಗಿದ್ದರು. 2015ರಲ್ಲಿ ಪರಿಕಲ್ಪನೆ ಟಿಪ್ಪಣಿ ಬರೆಯುವುದರ ಜತೆಗೆ, ಯೋಜನೆಗೆ ಅನುಮೋದನೆ ಪಡೆಯಲು ಅವರು ಸಂಸತ್ತಿನ ಸ್ಥಾಯಿ ಸಮಿತಿಯ ಹಾಗೂ ಉನ್ನತ ಮಟ್ಟದ ತಜ್ಞರ ಸಮಿತಿ ಮುಂದೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪರ ವಾದ ಮಂಡನೆಯ ನಾಯಕತ್ವವನ್ನೂ ವಹಿಸಿದ್ದರು. ವಿಶ್ವಬ್ಯಾಂಕ್, ನೀತಿ ಆಯೋಗ ಹಾಗೂ ಇತರ ಸಚಿವಾಲಯಗಳ ಮಧ್ಯೆ ಸಮನ್ವಯಕಾರರಾಗಿಯೂ ಅವರು ಕೆಲಸ ಮಾಡಿದ್ದರು. ಪರಿಣಾಮ, ಕುಮಾರ್ ಅವರ ಶ್ರಮಕ್ಕೆ ಮನ್ನಣೆ ಲಭಿಸಿತ್ತು.
‘ನಾವು ಭಾರಿ ಸವಾಲಿನ ಯೋಜನೆಗಳನ್ನು ಕೇಳಿದ್ದೆವು. ಅದಕ್ಕೆ ಅನುಮೋದನೆ ನೀಡಲಾಗಿದೆ. ಈಗ ನಮಗೆ ಭಾರತದಲ್ಲೇ ಸಿದ್ಧಪಡಿಸಿದ ಎಸ್‌ಇಸಿಸಿ ಆಧರಿತ ಸಾಮಾಜಿಕ ನೋಂದಣಿ ಬೇಕಾಗಿದೆ. ಅದರಲ್ಲಿ ಕಾರ್ಯಕ್ರಮಗಳು ಭಾರತ ಸರ್ಕಾರದ್ದಿರಬೇಕು ಮತ್ತು ವಿಶೇಷ ಸಂದರ್ಭಗಳಲ್ಲಿ ವಿಶ್ವಬ್ಯಾಂಕ್ ಸೇರಿದಂತೆ ವಿವಿಧ ಸಂಘಟನೆಗಳ ತಜ್ಞರಿಂದಲೂ ಸಲಹೆ ಪಡೆಯಲು ಸಾಧ್ಯವಾಗಬೇಕು’ ಎಂದು ಅವರು 2015ರಲ್ಲಿ ಬರೆದಿದ್ದ ಟಿಪ್ಪಣಿಯಲ್ಲಿ ನಮೂದಿಸಿದ್ದರು.
2016ರವರೆಗೂ ಈ ಯೋಜನೆಯಲ್ಲಿ ಕುಮಾರ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ 2017ರಲ್ಲಿ ಅವರಿಗೆ ಕೆಲವು ಅನುಮಾನಗಳು ಮೂಡಲಾರಂಭಿಸಿದವು.
ಸಾಮಾಜಿಕ ನೋಂದಣಿಯನ್ನು ಜಾರಿ ಮಾಡುವ ವಿಚಾರದಲ್ಲಿ 2017ರ ಮಾರ್ಚ್ 15ರಂದು ವಿಶ್ವಬ್ಯಾಂಕ್‌ಗೆ ಬರೆದ ಟಿಪ್ಪಣಿಯಲ್ಲಿ ಅವರು ಕೆಲವು ಎಚ್ಚರಿಕೆಯ ಸೂಚನೆಗಳನ್ನು ಅವರು ನೀಡಿದ್ದರು. ನೋಂದಣಿಯ ಬಗ್ಗೆ ಅವರಲ್ಲಿ ಹೆಚ್ಚುತ್ತಿರುವ ಆತಂಕಕ್ಕೆ ಇದು ಸೂಚನೆಯಾಗಿತ್ತು.
‘ನೈತಿಕತೆಯನ್ನು ಮೂಲೆಗುಂಪಾಗಿಸಿರುವ ಭ್ರಷ್ಟ ಅಧಿಕಾರಶಾಹಿ ವ್ಯವಸ್ಥೆ ಇರುವ ಸನ್ನಿವೇಶದಲ್ಲಿ, ಖಾಸಗಿತನದ ಬಗ್ಗೆ ಗರಿಷ್ಠ ಕಾಳಜಿ ಹೊಂದಿರುವ ಸಾಮಾಜಿಕ ನೋಂದಣಿ ವ್ಯವಸ್ಥೆ ರೂಪಿಸುವತ್ತ ನಾವು ಗಮನ ಹರಿಸಬೇಕಾಗಿದೆ. ಪ್ರಸಕ್ತ, ಅಮೆರಿಕದ ಸಾಮಾಜಿಕ ಭದ್ರತಾ ವ್ಯವಸ್ಥೆ ಮಾತ್ರ ಈ ರೀತಿ ಕೆಲಸ ಮಾಡುತ್ತಿದೆ. ಅಲ್ಲಿ ಮಾತ್ರ ಖಾಸಗಿತನಕ್ಕೆ ಗರಿಷ್ಠ ಗೌರವ ನೀಡಲಾಗಿದೆ’ ಎಂದು ಅವರು ಬರೆದಿದ್ದರು. ಆದರೆ ಕಡತದಲ್ಲಿ ಕುಮಾರ್ ದಾಖಲಿಸಿದ ಟಿಪ್ಪಣಿಗೆ ಯಾರೊಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ.
ಅದೇ ಸಂದರ್ಭದಲ್ಲಿ ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು. ಹೀಗಿದ್ದೂ ಮೋದಿ ಸರ್ಕಾರವು, ಆಧಾರ್‌ಗೆ ನೋಂದಣಿ ಮಾಡಿಕೊಳ್ಳಿ ಮತ್ತು ಸರ್ಕಾರದ ಪ್ರತ್ಯೇಕಿತ ಡೇಟಾಬೇಸ್‌ಗೆ ತಮ್ಮ ವಿಶಿಷ್ಟ ‘ಐಡಿ’ಯನ್ನು ನಮೂದಿಸಿ ಎಂದು ನಾಗರಿಕರಿಗೆ ನಿರ್ದೇಶನದ ಮೇಲೆ ನಿರ್ದೇಶನಗಳನ್ನು ನೀಡುತ್ತಲೇ ಇತ್ತು.
‘ಈ ಟಿಪ್ಪಣಿ ಬರೆಯುವ ಹೊತ್ತಿನಲ್ಲೇ, ಆಧಾರ್‌ನ ದುರ್ಬಳಕೆ ಬಗ್ಗೆ ತಮ್ಮ ಕಳವಳ ಹೆಚ್ಚುತ್ತಲೇ ಇತ್ತು’ ಎಂದು ಕುಮಾರ್ ಹಫ್‌ಪೋಸ್ಟ್‌ಗೆ ತಿಳಿಸಿದ್ದಾರೆ.
‘ಇಂದು ನೀವು ಹಣ ಜಮೆ ಮಾಡಲು ಹೋಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಸಲುವಾಗಿ ಶುಲ್ಕ ಪಾವತಿ ಮಾಡಲು ಅಥವಾ ಅದನ್ನು ಮರುಪಾವತಿ ಮಾಡಿಕೊಳ್ಳಲು ಹೋಗಿ, ಪ್ರತೀ ಭಾರಿ ನಿಮ್ಮಿಂದ ಆಧಾರ್ ಕೇಳಲಾಗುತ್ತದೆ ಮತ್ತು ನೀವು ಯಾರು ಎಂಬುದರ ಬಗ್ಗೆ ಪ್ರಶ್ನೆ ಎತ್ತಲಾಗುತ್ತದೆ. ಇದೆಲ್ಲವೂ ಕಣ್ಗಾವಲು. ಅಂತಹ ಸಂದರ್ಭದಲ್ಲಿ, ಆಧಾರ್ ಎಂಬುದು ಅತ್ಯಂತ ಅಪಾಯಕಾರಿ ಸಲಕರಣೆ. ಅದು ವಿಪರೀತ ಎನ್ನುವಷ್ಟು ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ತಂತ್ರಜ್ಞಾನ ಹೇಗಿದೆ ಎಂದರೆ, ಯಾವುದೂ ರಹಸ್ಯವಲ್ಲ’ ಎಂದು ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
‘ಒಬ್ಬ ಠಾಣಾಧಿಕಾರಿಗೆ ಬಯೋಮೆಟ್ರಿಕ್ ಡೇಟಾಬೇಸ್ ಲಭ್ಯತೆ ಇದೆ ಎಂದು ಊಹಿಸಿಕೊಳ್ಳಿ. ಯಾವುದೋ ಒಂದು ಪ್ರಕರಣವನ್ನು ಬೇಧಿಸುವಲ್ಲಿ, ಆತನ ಮೇಲೆ ಸಾರ್ವಜನಿಕರ ಒತ್ತಡ ಇದೆ. ಅವ ಏನು ಮಾಡುತ್ತಾನೆ? ಯಾರಾದರೊಬ್ಬರನ್ನು ಸಿಲುಕಿಸಿಹಾಕುತ್ತಾನೆ. ಇಂತಹ ಸಂದರ್ಭಗಳಿರುವಾಗ, ಬಯೋಮೆಟ್ರಿಕ್ ಮಾಹಿತಿಯನ್ನು ಇಟ್ಟುಕೊಳ್ಳುವುದು ಮತ್ತು ಅವನ್ನು ಪದೇ–ಪದೇ ಬಳಸುವುದು ಭಾರಿ ಅಪಾಯಕಾರಿ’ ಎಂದು ಸಂದರ್ಶನದ ವೇಳೆ ಕುಮಾರ್ ಹೇಳಿದ್ದರು.
ಕುಮಾರ್ ಅವರು ಈ ಟಿಪ್ಪಣಿ ಬರೆದು ಹಲವು ತಿಂಗಳ ನಂತರ 2017ರ ಆಗಸ್ಟ್‌ನಲ್ಲಿ, ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿತು.
‘ವ್ಯಕ್ತಿಯ ಕಾರ್ಯಕ್ಷಮತೆ, ಆರ್ಥಿಕ ಸ್ಥಿತಿಗತಿ, ಆರೋಗ್ಯ, ವೈಯಕ್ತಿಕ ಆದ್ಯತೆಗಳು, ಆಸಕ್ತಿಗಳು, ವರ್ತನೆ, ಇರುವ ಸ್ಥಳ, ಚಲನವಲನ ಮೊದಲಾದ ವೈಯಕ್ತಿಕ ಆಯಾಮಗಳನ್ನು ಗ್ರಹಿಸುವ ಅಥವಾ ವಿಶ್ಲೇಷಿಸುವ ಸ್ವಯಂಚಾಲಿತ ವೈಯಕ್ತಿಕ ಮಾಹಿತಿ ಪ್ರಕ್ರಿಯೆಯು ಕಣ್ಗಾವಲಿನ ಒಂದು ಸ್ವರೂಪವೇ ಆಗಿದೆ. ಧರ್ಮ, ಜಾತಿ ಮತ್ತು ಜನಾಂಗದ ಆಧಾರದ ಮೇಲೆ ತಾರತಮ್ಯಕ್ಕೆಇಂತಹ ‘ಪ್ರೊಫೈಲಿಂಗ್’ ಕಾರಣವಾಗಬಹುದು’ ಸುಪ್ರೀಂ ಕೋರ್ಟ್ ಹೇಳಿತ್ತು.
ಆಧಾರ್ ಇಲ್ಲದೆಯೇ ಸಾಮಾಜಿಕ ನೋಂದಣಿಯನ್ನು ರೂಪಿಸುವ ಎಲ್ಲಾ ಸಾಧ್ಯತೆಗಳನ್ನು ಸರ್ಕಾರವು ಆರಂಭದಲ್ಲಿ ಪರಿಶೀಲಿಸಿತ್ತು. ಆದರೆ, ಅಂತಿಮವಾಗಿ ಆಧಾರ್ ಕಾಯ್ದೆಗೇ ತಿದ್ದುಪಡಿ ತರಲು ನಿರ್ಧರಿಸಿತು. ಈ ಬದಲವಾಣೆಗಳನ್ನು ಜಾರಿಗೆ ತಂದರೆ, ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರೂಪಿಸಿದ ಸುರಕ್ಷಾ ಕ್ರಮಗಳು ಅರ್ಥಹೀನವಾಗುತ್ತವೆ.
‘ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸರ್ಕಾರ ಬಳಸಿಕೊಳ್ಳುವ ಸ್ವರೂಪವನ್ನು ನಿಯಂತ್ರಿಸದೇ ಹೋದರೆ, ಸಾಮಾಜಿಕ ನೋಂದಣಿಯಂತಹ ಡೇಟಾಬೇಸ್ ಅನ್ನು ಸರ್ಕಾರವು ಹಲವು ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತದೆ.ಅಧಿಕಾರದಲ್ಲಿರುವ ಯಾವುದೇ ರಾಜಕೀಯ ಪಕ್ಷಕ್ಕೆ, ಮತದಾರರ ‘ಪ್ರೊಫೈಲ್’ ರಚಿಸಿಕೊಡುವ ಇಂತಹ ಡೇಟಾಬೇಸ್ ಲಭ್ಯವಿದೆ ಎಂದಿಟ್ಟುಕೊಳ್ಳಿ. ಆ ಪಕ್ಷವು ತಮ್ಮದೇ ಅಭ್ಯರ್ಥಿಗಳು ಅಧಿಕಾರಕ್ಕೆ ಬರುವ ರೀತಿಯಲ್ಲಿ ಮತದಾನದ ಕ್ಷೇತ್ರಗಳನ್ನೇ ಮರುವಿಂಗಡಣೆ ಮಾಡಿಕೊಳ್ಳಬಹುದು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸ ಕೊಡಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮರ್ಥ್ಯ ಕುಗ್ಗುತ್ತಿರುವ ಭಾರತದ ಸಂಸ್ಥೆಗಳು, ಸಾಮಾಜಿಕ ನೋಂದಣಿಯಂತಹ ಕೇಂದ್ರೀಕೃತ ವ್ಯವಸ್ಥೆಯೊಂದಿಗೆ ವ್ಯವಹರಿಸಲು ಅಸಮರ್ಥವಾಗಿವೆ ಎಂಬುದು ಕುಮಾರ್ ಅವರ ನಂಬಿಕೆ.
‘ಎಲ್ಲಾ ವ್ಯವಸ್ಥೆಗಳಲ್ಲಿ ಸಮರೂಪತೆ ಬರುವವರೆಗೂ, ಈ ವ್ಯವಸ್ಥೆಯನ್ನು ನಾನು ಜಾರಿಗೆ ತರುತ್ತಿರಲಿಲ್ಲ. ಮೊದಲು ನೀವು ಸಿಆರ್‌ಪಿಸಿಯನ್ನು ಪರಿಶೀಲಿಸಿ. ನಿಮ್ಮ ಎಂತಹ ಬೆರಳಚ್ಚುಗಳು ನಿಮ್ಮ ಇರುವಿಕೆಗೆ ಸಾಕ್ಷ್ಯ ಎಂದು ಸಿಆರ್‌ಪಿಸಿ ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸರ್ಕಾರದಲ್ಲಿನ ದತ್ತಾಂಶ ಸುರಕ್ಷತೆಯನ್ನು ಸುಧಾರಿಸಿ, ನ್ಯಾಯಾಲಯಗಳ ಸಾಮರ್ಥ್ಯವನ್ನು ಹೆಚ್ಚಿಸಿ. ನಂತರ ಇಂತಹ ವ್ಯವಸ್ಥೆಯನ್ನು ಜಾರಿಗೆ ತನ್ನಿ. ಇಲ್ಲದಿದ್ದಲ್ಲಿ ಸರ್ಕಾರವು ಇದನ್ನುಖಂಡಿತವಾಗಿ ದುರುಪಯೋಗ ಮಾಡಿಕೊಳ್ಳುತ್ತದೆ’ ಎಂದು ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಅಧಿಕಾರವನ್ನು ನಿಯಂತ್ರಿಸಬೇಕಾದ ಸಂಸ್ಥೆಗಳ ಮೇಲಿನ ನನ್ನ ನಂಬಿಕೆ ದುರ್ಬಲವಾಗಿದೆ ಎಂದು ಕುಮಾರ್ ಹೇಳಿದ್ದಾರೆ.
‘ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇತ್ತು. ನಾಗರಿಕ ಸೇವಾ ಅಧಿಕಾರಿಗಳು, ನ್ಯಾಯಾಲಯಗಳು, ಪೊಲೀಸರು ಮತ್ತು ಇತರ ಸಂಸ್ಥೆಗಳ ಸಾಮರ್ಥ್ಯ ಮತ್ತುದೃಢತೆ ಮೇಲಿನ ನನ್ನ ನಂಬಿಕೆಗೆ ಯಾವತ್ತೂ ಸವಾಲು ಬಂದಿರಲಿಲ್ಲ, ಆ ನಂಬಿಕೆ ನಾಶವೂ ಆಗಿರಲಿಲ್ಲ. ಇಂತಹ ಸಂಸ್ಥೆಗಳ ಸ್ವಾತಂತ್ರ್ಯವನ್ನು ಎತ್ತಿಹಿಡಿದ ವ್ಯಕ್ತಿಗಳನ್ನು ನಾನು ನೋಡಿದ್ದೇನೆ. ಹೀಗಾಗಿಯೇ ನಾನು ಇಂತಹ ವ್ಯವಸ್ಥೆಯನ್ನು ಉತ್ತೇಜಿಸಿದೆ. ವ್ಯವಸ್ಥೆಯ ಬದ್ಧತೆ ಮೇಲೆ ನನಗೆ ನಂಬಿಕೆ ಇದ್ದಾಗ, ನಾನಿದನ್ನು ಪ್ರಸ್ತಾಪಿಸಿದ್ದೆ. ಆದರೆ, ಇಂದು ಈ ಬದ್ಧತೆ ಕುಸಿದಿದೆ’ ಎಂದು ಕುಮಾರ್ ಹೇಳಿದ್ದಾರೆ.
‘ನನ್ನ ಹಕ್ಕುಗಳಿಗಿಂತಲೂ, ಸರ್ಕಾರಕ್ಕೆ ಹೆಚ್ಚಿನ ಹಕ್ಕುಗಳು ಇರಬಾರದು. ಎರಡೂ ಸಮತೋಲಿತವಾಗಿರಬೇಕು. ಪ್ರಜಾಪ್ರಭುತ್ವ ಮಾತ್ರವೇ ವ್ಯಕ್ತಿಗಳು ಮತ್ತು ಸರ್ಕಾರಕ್ಕೆ ಸಮನಾದ ನೆಲೆ ಒದಗಿಸುತ್ತದೆ. ಆದರೆ, ವ್ಯಕ್ತಿಗತ ಸ್ವಾಂತಂತ್ರ್ಯ ಅತ್ಯಂತ ಅಗತ್ಯ ಎಂದು ನಾನು ಬಲವಾಗಿ ನಂಬುತ್ತೇನೆ’ ಎನ್ನುತ್ತಾರೆ ಕುಮಾರ್.
(ಲೇಖಕ: ಪತ್ರಕರ್ತ ಮತ್ತು ಲ್ಯಾಂಡ್ ಕಾನ್‌ಫ್ಲಿಕ್ಟ್ ವಾಚ್‌ನ ಸಹ ಸಂಸ್ಥಾಪಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.