ADVERTISEMENT

ಅಬಕಾರಿ ನೀತಿ ಹಗರಣ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

ರಾಯಿಟರ್ಸ್
Published 20 ಜೂನ್ 2024, 14:52 IST
Last Updated 20 ಜೂನ್ 2024, 14:52 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.

ವಿಶೇಷ ನ್ಯಾಯಾಧೀಶ ನಿಯಾಯ್ ಬಿಂದು ಅವರು ಅರ್ಜಿಯ ಕುರಿತು ಆರೋಪಿ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ) ವಾದ ಹಾಗೂ ಪ್ರತಿವಾದ ಆಲಿಸಿದ ನಂತರ ಆದೇಶ ಪ್ರಕಟಿಸಿದರು.

ಪ್ರಕರಣದಲ್ಲಿ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ 3 ರವರೆಗೆ ವಿಸ್ತರಿಸಿ ನ್ಯಾಯಾಲಯ ಬುಧವಾರ ಆದೇಶಿಸಿತ್ತು. ಈ ಹಿಂದೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಮುಗಿದಿದ್ದರಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರು , ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದ್ದರು.

ADVERTISEMENT

ನ್ಯಾಯಾಲಯದ ಆದೇಶದಿಂದಾಗಿ ಕೇಜ್ರಿವಾಲ್ ಅವರು ನಿರಾಳರಾಗಿದ್ದಾರೆ. ಜಾಮೀನು ದೊರಕಿರುವುದಕ್ಕೆ ಪ್ರತಿಕ್ರಿಯಿಸಿರುವ ಆಮ್‌ ಆದ್ಮಿ ಪಾರ್ಟಿ (ಎಎಪಿ), ‘ಸತ್ಯಮೇವ ಜಯತೇ’ ಎಂದು ಹೇಳಿದೆ.

ಜಾಮೀನು ಮಂಜೂರು ಮಾಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಆದೇಶವನ್ನು 48 ಗಂಟೆಗಳ ಕಾಲ ತಡೆ ಹಿಡಿಯಬೇಕು ಎಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ವಿಶೇಷ ನ್ಯಾಯಾಧೀಶ ನಿಯಾಯ್‌ ಬಿಂದು ಅವರು ತಿರಸ್ಕರಿಸಿದರು. 

₹1 ಲಕ್ಷದ ವೈಯಕ್ತಿಕ ಬಾಂಡ್‌ ಪಡೆದು ಕೇಜ್ರಿವಾಲ್‌ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದರು. 

ತನಿಖೆಯ ದಿಕ್ಕು ತಪ್ಪಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು ಎಂಬುದೂ ಸೇರಿದಂತೆ ವಿವಿಧ ಷರತ್ತುಗಳನ್ನು ಹಾಕಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ತನಿಖೆಗೆ ಸಹಕಾರ ನೀಡುವಂತೆ ಮತ್ತು ಅಗತ್ಯವಿದ್ದಾಗಲೆಲ್ಲ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದೂ ನ್ಯಾಯಾಧೀಶರು ತಿಳಿಸಿದರು. 

ಇದಕ್ಕೂ ಮೊದಲು, ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆದೇಶವನ್ನು ಕಾಯ್ದಿರಿಸಿತ್ತು. 

ದೆಹಲಿಯ ಎಎಪಿ ಸರ್ಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾರ್ಚ್‌ 21ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿತ್ತು. 

ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕೇಜ್ರಿವಾಲ್‌ ಅವರಿಗೆ ಸುಪ್ರೀಂ ಕೋರ್ಟ್‌ 21 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮತ್ತೆ ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. 

ಸತ್ಯವನ್ನು ಸೋಲಿಸಲಾಗದು: ಎಎಪಿ 

ನ್ಯಾಯಾಲಯ ಜಾಮೀನು ಮಂಜೂರು ಮಾಡಿರುವುದನ್ನು ಸ್ವಾಗತಿಸಿರುವ ಎಎಪಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದೆ.  ದೆಹಲಿ ಸಚಿವೆ ಅತಿಶಿ ಅವರು ‘ಸತ್ಯಮೇವ ಜಯತೇ’ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.  ‘ಸತ್ಯಕ್ಕೆ ತೊಂದರೆ ಕೊಡಬಹುದು. ಆದರೆ ಸೋಲಿಸಲು ಸಾಧ್ಯವಿಲ್ಲ. ಬಿಜೆಪಿಯ ‘ಇಡಿ’ ಎತ್ತಿರುವ ಎಲ್ಲ ಆಕ್ಷೇಪಗಳನ್ನು ತಿರಸ್ಕರಿಸಿರುವ ಗೌರವಾನ್ವಿತ ನ್ಯಾಯಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿದೆ’ ಎಂದು ಎಎಪಿ ‘ಎಕ್ಸ್‌’ನಲ್ಲಿ ಬರೆದಿದೆ.  ‘ನ್ಯಾಯಾಲಯದ ಮೇಲೆ ನಂಬಿಕೆ ಇದೆ –ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಿದೆ. ಸತ್ಯ ಗೆದ್ದಿದೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.