ನವದೆಹಲಿ: ನ್ಯೂಸ್ ಕ್ಲಿಕ್ ಆನ್‌ಲೈನ್ ಸುದ್ದಿ ಸಂಸ್ಥೆ ಹಾಗೂ ಅದರ ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿಯನ್ನು ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಆಡಳಿತ ಪಕ್ಷದ ವಿರುದ್ಧ ಸತ್ಯ ಮಾತನಾಡುವವರ ವಿರುದ್ಧ ಮಾತ್ರ ಬಿಜೆಪಿ ಸರ್ಕಾರ ಬಲವಂತದ ಕ್ರಮ ತೆಗೆದುಕೊಳ್ಳುತ್ತಿದೆ. ದೇಶದಲ್ಲಿ ದ್ವೇಷ ಹರಡುವವರ ಹಾಗೂ ವಿಭಜಕ ನೀತಿ ಅನುಸರಿಸುತ್ತಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಟೀಕಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ‘ಇಂಡಿಯಾ’ ಪಕ್ಷಗಳ ಒಕ್ಕೂಟವು, ಮಾಧ್ಯಮ ಸಂಸ್ಥೆಗಳನ್ನು ತಮ್ಮ ಆತ್ಮೀಯ ಬಂಡವಾಳಶಾಹಿಗಳು ಸ್ವಾಧೀನಪಡಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಮೂಲಕ ಮಾಧ್ಯಮವನ್ನು ತನ್ನ ಪಕ್ಷಪಾತ ಮತ್ತು ಸೈದ್ಧಾಂತಿಕ ಹಿತಾಸಕ್ತಿಗಳ ಮುಖವಾಣಿಯನ್ನಾಗಿ ಪರಿವರ್ತಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಹೇಳಿದೆ.
ಸರ್ಕಾರವು ಮಾಧ್ಯಮಗಳನ್ನು ತನ್ನ ಮುಖವಾಣಿಯನ್ನಾಗಿ ಮಾಡಿ, ತನ್ನ ಪಕ್ಷಪಾತಿ ನಿಲುವು ಹಾಗೂ ಸಿದ್ಧಾಂತಗಳಿಗಾಗಿ ತಮ್ಮ ಆತ್ಮೀಯ ಬಂಡವಾಳಶಾಹಿಗಳು ಖರೀದಿ ಮಾಡುವ ವ್ಯವಸ್ಥೆ ಮಾಡಿಕೊಡುತ್ತಿದೆ ಎಂದು ಕಿಡಿ ಕಾರಿದೆ.
‘ಸರ್ಕಾರ ಹಾಗೂ ಅವರ ಸಿದ್ಧಾಂತವನ್ನು ಪ್ರತಿಪಾದಿಸುವವರು ತಮ್ಮ ವಿರುದ್ಧ ಸತ್ಯ ಮಾತನಾಡುವವರ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಕೈಹಾಕಿದ್ದಾರೆ. ಇದಲ್ಲದೆ, ಬಿಜೆಪಿ ಸರ್ಕಾರವು ಮಾಹಿತಿ ತಂತ್ರಜ್ಞಾನ ನಿಯಮ 2021ರ ಮೂಲಕ, ಮಾಧ್ಯಮಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುವುದನ್ನು ನಿರ್ಬಂಧಿಸಿದೆ. ಹಾಗೆ ಮಾಡುವುದರ ಮೂಲಕ ಬಿಜೆಪಿ ತನ್ನ ಲೋಪದೋಷಗಳು ಮತ್ತು ಪಾಪಗಳನ್ನು ಭಾರತದ ಜನರಿಂದ ಮರೆಮಾಚುತ್ತಿರುವುದು ಮಾತ್ರವಲ್ಲದೆ, ಪ್ರಬುದ್ಧ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ಸ್ಥಾನಮಾನವನ್ನು ಸಹ ರಾಜಿ ಮಾಡಿಕೊಳ್ಳುತ್ತಿದೆ’ ಎಂದು ಇಂಡಿಯಾ ಹೇಳಿದೆ.
ದೇಶದ ಹಾಗೂ ಜನರ ಹಿತಾಸಕ್ತಿಗೆ ಪೂರಕವಾಗಿರುವ ಕೆಲಸ ಮಾಡಿ ಎಂದು ಹೇಳಿರುವ ವಿಪಕ್ಷಗಳ ಒಕ್ಕೂಟವು, ತಮ್ಮ ವೈಫಲ್ಯವನ್ನು ಮರೆಮಾಚಲು ಮಾಧ್ಯಮಗಳ ವಿರುದ್ಧ ದಾಳಿ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದೆ.
ಚೀನಾದ ವಿಚಾರಧಾರೆಗಳನ್ನು ಪ್ರಚುರಪಡಿಸಲು ಭಾರೀ ಹಣ ಪಡೆದಿದೆ ಎನ್ನುವ ಆರೋಪದ ಮೇಲೆ ಯುಎಪಿಎ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನ್ಯೂಸ್ ಕ್ಲಿಕ್ ಸಂಸ್ಥೆ ಹಾಗೂ ಅದರ ಪತ್ರಕರ್ತರಿಗೆ ಸೇರಿದ 30 ಸ್ಥಳಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಮಂಗಳವಾರ ದಾಳಿ ನಡೆಸಿತ್ತು.
‘ಉದ್ಯೋಗಿಗಳನ್ನು ಹೆದರಿಸುವ ಕೃತ್ಯ’
ಕಾರ್ಮಿಕರ ಹಾಗೂ ರೈತರ ಸಮಸ್ಯೆಗಳನ್ನು ನ್ಯೂಸ್‌ಕ್ಲಿಕ್ ಸುದ್ದಿತಾಣವು ವರದಿ ಮಾಡಿದ ನಂತರದಲ್ಲಿ ಸರ್ಕಾರವು ಈ ಸುದ್ದಿತಾಣವನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕೇಂದ್ರವು ನಡೆಸಿದ ಇನ್ನೊಂದು ಯತ್ನ ಇದು ಎಂಬುದು ನಮ್ಮ ನಂಬಿಕೆ. ಮಾಧ್ಯಮ ಸಂಸ್ಥೆಯೊಂದರ ಮೇಲೆ ದಾಳಿ ನಡೆಸುವುದು ಹಾಗೂ ಅದರ ಎಲ್ಲ ಉದ್ಯೋಗಿಗಳನ್ನು ಬೆದರಿಸುವುದು ಹಿಂದೆಂದೂ ಕೇಳಿರದ ಕೃತ್ಯ.
ಜನರ ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಈ ದಾಳಿ ನಡೆಸಲಾಗಿದೆ. ಇದನ್ನು ನಾವು ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಈ ವಿಚಾರವಾಗಿ ಈ ಪತ್ರಕರ್ತರೊಂದಿಗೆ ನಾವಿದ್ದೇವೆ. ಕೇಂದ್ರವು ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇವೆ.
ನ್ಯಾಷನಲ್ ಅಲಯನ್ಸ್ ಆಫ್ ಜರ್ನಲಿಸ್ಟ್ಸ್, ದೆಹಲಿ ಪತ್ರಕರ್ತರ ಒಕ್ಕೂಟ, ಕೇರಳ ವೃತ್ತಿನಿರತ ಪತ್ರಕರ್ತರ ಸಂಘದ ದೆಹಲಿ ಘಟಕ
‘ಬಾಯಿ ಮುಚ್ಚಿಸುವ ಯತ್ನ’
ದಾಳಿಯು ಮಾಧ್ಯಮಗಳ ಬಾಯಿ ಮುಚ್ಚಿಸುವ ಇನ್ನೊಂದು ಯತ್ನ ಎಂಬ ಕಳವಳ ನಮ್ಮದು. ಅಪರಾಧ ಆಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಹಾಗೆ ಮಾಡುವಾಗ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಬೇಕು. ನಿರ್ದಿಷ್ಟ ಅಪರಾಧಗಳ ಕುರಿತ ತನಿಖೆಯು, ಕಠಿಣ ಕಾನೂನಿನ ಅಡಿಯಲ್ಲಿ ಎಲ್ಲೆಡೆ ಭೀತಿ ಮೂಡಿಸುವ ಕೆಲಸ ಮಾಡಬಾರದು. ತನಿಖೆಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಅವಕಾಶವನ್ನು, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಾಗೂ ಟೀಕೆಗಳನ್ನು ಮಾಡುವ ಅವಕಾಶವನ್ನು ಕಬಳಿಸಬಾರದು.
– ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.