ಪಟ್ನಾ: ಮುಂಬರುವ ಲೋಕಸಭೆ ಚುನಾವಣೆಗೆ ನಾನು ಪ್ರಧಾನಿ ಅಭ್ಯರ್ಥಿಯಾಗಲು ಬಯಸುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಂಚಾಲಕನ ಪಾತ್ರವನ್ನು ನೀವು ಸ್ವೀಕರಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ನಾನು ಏನೂ ಆಗಲು ಬಯಸುವುದಿಲ್ಲ. ನಾನು ಇದನ್ನು ನಿಮಗೆ ಮತ್ತೆ ಹೇಳುತ್ತಿದ್ದೇನೆ. ನನಗೆ ಅಂತಹ ಯಾವುದೇ ಆಸೆ ಇಲ್ಲ. ಆದರೆ, ಎಲ್ಲರನ್ನು ಒಗ್ಗೂಡಿಸಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿಯನ್ನು ಜಂಟಿಯಾಗಿ ಎದುರಿಸಲು ರಚಿಸಲಾಗಿರುವ 26 ಪಕ್ಷಗಳ ’ಇಂಡಿಯಾ’ ಮೈತ್ರಿಕೂಟವು ಈಗಾಗಲೇ ಎರಡು ಬಾರಿ ಸಭೆ ನಡೆಸಿದೆ. ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ನಡೆಯಲಿದೆ.
‘ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಕಾರ್ಯತಂತ್ರ ಹಾಗೂ ಸೀಟು ಹಂಚಿಕೆಯಂತಹ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಹಲವು ಕಾರ್ಯಸೂಚಿಗಳನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
‘2024ರ ಲೋಕಸಭಾ ಚುನಾವಣೆಗೆ ಮೊದಲು ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಒಗ್ಗೂಡಿಸಲು ಬಯಸುತ್ತೇನೆ. ಹಾಗಾಗಿ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಯಾವುದೇ ಆಸೆ ಇಲ್ಲ’ ಎಂದಿದ್ದಾರೆ.
ಬಿಜೆಪಿಯನ್ನು ವಿರೋಧಿಸುವ ವಿವಿಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್, ಮೈತ್ರಿಕೂಟ ಸೇರುವ ಪಕ್ಷಗಳ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.