ದೆಹಲಿ: ಕೊರೊನಾ ವೈರಸ್ ಬಾಧಿತ ಚೀನಾದ ವುಹಾನ್ ನಗರದಲ್ಲಿರುವ ಭಾರತೀಯರನ್ನು ಅಲ್ಲಿಂದ ಕರೆತರಲುಭಾರತ ಸಿದ್ಧತೆ ನಡೆಸಿದೆ.ಈ ಮಾರಣಾಂತಿಕ ವೈರಲ್ 17 ದೇಶಗಳಿಗೆ ವ್ಯಾಪಿಸಿದ್ದು ಇಲ್ಲಿಯವರೆಗೆ170 ಮಂದಿ ಸಾವಿಗೀಡಾಗಿದ್ದಾರೆ. 7,711 ಮಂದಿಗೆ ರೋಗಾಣು ತಗುಲಿದೆ.
ವುಹಾನ್ ನಗರದಲ್ಲಿರುವವರನ್ನು ಭಾರತಕ್ಕೆ ಕರೆತರುವುದಕ್ಕಾಗಿ ಎರಡು ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಬೇಕು ಎಂದು ಭಾರತ ಸರ್ಕಾರ ಮನವಿ ಮಾಡಿತ್ತು.ವುಹಾನ್‌ನಲ್ಲಿ ಭಾರತದ ಬಹುತೇಕ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ನೆಲೆಸಿದ್ದು ಅವರಿಗೆ ಇದು ಸಹಕಾರಿಯಾಗಲಿದೆ.
ವೈರಸ್ ಬಾಧಿತ ಪ್ರದೇಶಗಳಿಂದ ಭಾರತೀಯರನ್ನು ಕರೆತರುವ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ನಿರ್ಧರಿಸಿರುವ ಪತ್ರವು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಶುಕ್ರವಾರ ಸಂಜೆ ವುಹಾನ್‌ನಿಂದ ಭಾರತೀಯರನ್ನು ಕರೆತರಲು ಸಿದ್ಥತೆ ನಡೆಸಲಾಗಿದೆ. ವುಹಾನ್ ನಗರದ ಸುತ್ತುಮುತ್ತ ವಾಸಿಸುತ್ತಿರುವ ಭಾರತೀಯರನ್ನು ಈ ವಿಮಾನ ಕರೆತರಲಿದ್ದು, ಸಂಬಂಧಪಟ್ಟವರಿಗೆ ಇದರ ಮಾಹಿತಿ ನೀಡಲಾಗಿದೆ ಎಂದು ಆ ಪತ್ರದಲ್ಲಿದೆ.
ಅದೇ ವೇಳೆ ಹುಬೇ ಪ್ರಾಂತ್ಯದ ಇತರ ಭಾಗದಲ್ಲಿರುವ ಭಾರತೀಯರನ್ನು ಇನ್ನೊಂದು ವಿಮಾನದಲ್ಲಿ ಕರೆತರಲಾಗುವುದು ಎಂದು ಇದರಲ್ಲಿದೆ.
ಭಾರತ ಸರ್ಕಾರ ಮತ್ತು ಭಾರತದ ರಾಯಭಾರಿ ಕಚೇರಿ ಅಲ್ಲಿರುವ ಭಾರತೀಯರ ಮಾಹಿತಿ ಕಲೆ ಹಾಕಿದ್ದು ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದೆ.ಹುಬೇ ಪ್ರಾಂತ್ಯದಲ್ಲಿ ಎಷ್ಟು ಭಾರತೀಯರು ಇದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಬಹಿರಂಗವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.