ನವದೆಹಲಿ: ‘ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಸೇವಾ ಮನೋಭಾವದ ವಿಚಾರದಲ್ಲಿ ಕ್ರೈಸ್ತರು ವಹಿಸಿರುವ ಪಾತ್ರವನ್ನು ದೇಶವು ಹೆಮ್ಮೆಯಿಂದ ಸ್ಮರಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕ್ರಿಸ್‌ಮಸ್ ಅಂಗವಾಗಿ ತಮ್ಮ ನಿವಾಸದಲ್ಲಿ ಸೋಮವಾರ ಕ್ರೈಸ್ತ ಸಮುದಾಯದವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ಅವರು, ಕ್ರೈಸ್ತರು ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿದರು. ಈ ಹಿಂದೆ ಕ್ರೈಸ್ತರೊಂದಿಗೆ ತಾವು ಹೊಂದಿದ್ದ ನಿಕಟ ಹಾಗೂ ಸೌಹಾರ್ದಯುತ ಸಂಬಂಧವನ್ನು ಮೆಲುಕು ಹಾಕಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದವರು ನಡೆಸಿಕೊಂಡು ಬರುತ್ತಿರುವ ಸಂಸ್ಥೆಗಳು ದೇಶದಾದ್ಯಂತ ಸಮಾಜದ ಏಳಿಗೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಾ ಬಂದಿವೆ. ಬಡವರು ಮತ್ತು ದುರ್ಬಲರ ಸೇವೆಯಲ್ಲಿ ಅವರು ಯಾವಾಗಲೂ ಮುಂಚೂಣಿಯಲ್ಲಿ ಇದ್ದಾರೆ ಎಂದು ಪ್ರಶಂಸಿಸಿದರು.
ಯೇಸು ಕ್ರಿಸ್ತನ ಜೀವನ ಸಂದೇಶವು ಮುಖ್ಯವಾಗಿ ಸಹಾನುಭೂತಿ ಮತ್ತು ಸೇವೆಯ ಮೇಲೆ ಕೇಂದ್ರೀಕೃತವಾಗಿದೆ. ಸರ್ವರಿಗೂ ನ್ಯಾಯ ದೊರೆಯುವಂತಹ ಸಮಾಜದ ನಿರ್ಮಾಣಕ್ಕಾಗಿ ಅವರು ಶ್ರಮಿಸಿದ್ದರು. ಇದೇ ಮೌಲ್ಯಗಳು ನಮ್ಮ ಸರ್ಕಾರದ ಅಭಿವೃದ್ಧಿಯ ಪಯಣದಲ್ಲಿ ದಾರಿದೀಪವಾಗಿದೆ ಎಂದರು.
ದುರ್ಬಲರ ಸಬಲೀಕರಣವೇ ಗುರಿ (ಇಂದೋರ್ ವರದಿ): ಸಮಾಜದ ಬಡವರು ಹಾಗೂ ದುರ್ಬಲ ವರ್ಗಗಳನ್ನು ಗೌರವಿಸುವುದು ಮತ್ತು ಸಬಲೀಕರಣ ಮಾಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು.
ಮಧ್ಯಪ್ರದೇಶ ಸರ್ಕಾರ ಇಂದೋರ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡ ಅವರು, ‘ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ (ಕೇಂದ್ರದಲ್ಲಿ ಹಾಗೂ ಮಧ್ಯಪ್ರದೇಶದಲ್ಲಿ) ಅವಧಿಯಲ್ಲಿ ಇಂದೋರ್ ಹಾಗೂ ಸುತ್ತಮುತ್ತ ಹಲವು ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿವೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ದೊರೆತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.