ನವದೆಹಲಿ: ಅಮೆರಿಕ–ಭಾರತ ರಕ್ಷಣಾ ಪಾಲುದಾರಿಕೆ ವೇದಿಕೆ (ಯುಎಸ್‌ಐಎಸ್‌ಪಿಎಫ್) ಅಡಿಯಲ್ಲಿ ಭಾರತವು 2,060 ಆಮ್ಲಜನಕ ಕಾನ್ಸಂಟ್ರೇಟರ್, 30 ಸಾವಿರ ರೆಮ್‌ಡಿಸಿವಿರ್ ಔಷಧ, 467 ವೆಂಟಿಲೇಟರ್‌ಗಳು ಮತ್ತು 3 ಆಮ್ಲಜನಕ ಉತ್ಪಾದನಾ ಘಟಕಗಳನ್ನು ವಿದೇಶಿ ನೆರವಿನ ರೂಪದಲ್ಲಿ ಪಡೆದಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ಸ್ವಿಟ್ಜರ್‌ಲೆಂಡ್, ಪೋಲೆಂಡ್, ನೆದರಲ್ಯಾಂಡ್ಸ್ ಮತ್ತು ಇಸ್ರೇಲಿನಿಂದ ಈ ನೆರವು ಹರಿದುಬಂದಿದೆ. ಭಾರತವು ಏ. 27ರಿಂದ ವಿವಿಧ ದೇಶಗಳು ಮತ್ತು ಸಂಸ್ಥೆಗಳಿಂದ ಅಂತರರಾಷ್ಟ್ರೀಯ ದೇಣಿಗೆ ಮತ್ತು ಕೋವಿಡ್–19 ಪರಿಹಾರ ವೈದ್ಯಕೀಯ ಸರಬರಾಜು ಮತ್ತು ಸಲಕರಣೆಗಳ ಸಹಾಯವನ್ನು ಪಡೆಯುತ್ತಿದೆ ಎಂದು ಆರೋಗ್ಯ ಸಚಿವಾಲಯವು ಶನಿವಾರ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
‘ಏ. 27ರಿಂದ ಮೇ 7ರವರೆಗೆ ಒಟ್ಟಾರೆ 6,608 ಆಮ್ಲಜನಕ ಕಾನ್ಸಂಟ್ರೇಟರ್‌ಗಳು, 3,856 ಆಮ್ಲಜನಕ ಸಿಲಿಂಡರ್‌ಗಳು, 14 ಆಮ್ಲಜನಕ ಉತ್ಪಾದನಾ ಘಟಕಗಳು, 4,330 ವೆಂಟಿಲೇಟರ್‌ಗಳು, 3 ಲಕ್ಷ ರೆಮ್‌ಡಿಸಿವಿರ್ ವಯಲ್‌ಗಳು ತಲುಪಿವೆ’ಎಂದು ಹೇಳಿದೆ.
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವ್ಯಕ್ತವಾಗಿರುವ ಸಹಾಯ ಮತ್ತು ಬೆಂಬಲವನ್ನು ಶ್ಲಾಘಿಸಿರುವ ಕೇಂದ್ರ ಸರ್ಕಾರವು, ಈ ವೈದ್ಯಕೀಯ ಸಲಕರಣೆಗಳನ್ನು ವ್ಯವಸ್ಥಿತವಾಗಿ ಅವಶ್ಯವಿರುವ ಕಡೆಗಳಲ್ಲಿ ಹಂಚಿಕೆ ಮಾಡುವುದಾಗಿಯೂ ತಿಳಿಸಿದೆ.
‘ಜರ್ಮನಿಯಿಂದ ಬಂದಿರುವ ಸಂಚಾರಿ ಆಮ್ಲಜನಕ ಉತ್ಪಾದನಾ ಮತ್ತು ಭರ್ತಿ ಮಾಡುವ ಘಟಕ, 420 ಲೀಟರ್ ಸಾಮರ್ಥ್ಯದ ಆಮ್ಲಜನಕದ ಟ್ಯಾಂಕ್ ಮತ್ತು 100 ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ದೆಹಲಿಯಿಂದ ಅಸ್ಸಾಂಗೆ ರವಾನಿಸಲಾಗಿದೆ. ನೆದರ್‌ಲ್ಯಾಂಡ್‌ನಿಂದ ಪಡೆದ ವೆಂಟಿಲೇಟರ್‌ಗಳು ದೆಹಲಿಯಿಂದ ತೆಲಂಗಾಣಕ್ಕೆ ತೆರಳುತ್ತಿವೆ‘ ಎಂದು ಕೇಂದ್ರ ಸರ್ಕಾರವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.