ADVERTISEMENT

ದೇಶದಲ್ಲಿ ವಾಡಿಕೆಗಿಂತ ಶೇ 9ರಷ್ಟು ಹೆಚ್ಚು ಮಳೆ: ಹವಾಮಾನ ಇಲಾಖೆ

ಪಿಟಿಐ
Published 1 ಆಗಸ್ಟ್ 2024, 10:23 IST
Last Updated 1 ಆಗಸ್ಟ್ 2024, 10:23 IST
<div class="paragraphs"><p>ಮುಂಬೈನಲ್ಲಿ ಮಳೆ</p></div>

ಮುಂಬೈನಲ್ಲಿ ಮಳೆ

   

–ರಾಯಿಟರ್ಸ್ ಚಿತ್ರ

ನವದೆಹಲಿ: ದೇಶದಲ್ಲಿ ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಶೇ 9ರಷ್ಟು ಅಧಿಕ ಮಳೆಯಾಗಿದ್ದು, ಕೇಂದ್ರ ಭಾರತದ ಪ್ರದೇಶಗಳಲ್ಲಿ ವಾಡಿಕೆಗಿಂತ ಶೇ 33ರಷ್ಟು ಅಧಿಕ ಮಳೆ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ತಿಳಿಸಿದೆ.

ADVERTISEMENT

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲೂ ವಾಡಿಕೆಗಿಂತ ಅಧಿಕ ಮಳೆ ಸುರಿಯಲಿದೆ ಎಂದು ಅಂದಾಜು ಮಾಡಿದೆ. ಮಳೆ ತರುವ ‘ಎಲ್‌ ನಿನೊ’ ವಾತಾವರಣವು ಆಗಸ್ಟ್‌ ಕೊನೆಯ ವೇಳೆಗೆ ಸೃಷ್ಟಿಯಾಗುವುದರಿಂದ ಹೆಚ್ಚಿನ ಮಳೆ ಬೀಳಲಿದೆ ಎಂದು ವರದಿ ತಿಳಿಸಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಮಳೆಯ ದೀರ್ಘಾವಧಿ ಸರಾಸರಿ 42.28 ಸೆಂ.ಮೀ. ಇದೆ. ಈ ಬಾರಿ ಶೇ 106ರಷ್ಟು ಮಳೆ ಬೀಳುವುದಾಗಿ ಅಂದಾಜಿಸಲಾಗಿದೆ.

ಜೂನ್‌ 1ರಿಂದ ಇದುವರೆಗೆ 45.38 ಸೆಂ.ಮೀ. ಮಳೆಯಾಗಿದ್ದು, ಇದು ಈ ಅವಧಿಯ ವಾಡಿಕೆಗಿಂತ (44.58 ಸೆಂ.ಮೀ.) ಶೇ 2ರಷ್ಟು ಹೆಚ್ಚು ಇದೆ.

‘ಮುಂದಿನ ಎರಡು ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಅಧಿಕ ಮಳೆ ನಿರೀಕ್ಷಿಸಬಹುದು. ಈಶಾನ್ಯ ಭಾರತ, ಪೂರ್ವ ಭಾಗದ ಕೆಲವು ಪ್ರದೇಶಗಳು, ಲಡಾಖ್, ಸೌರಾಷ್ಟ್ರ ಮತ್ತು ಕಛ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು’ ಎಂದು ವರದಿ ತಿಳಿಸಿದೆ.

ಜುಲೈನಲ್ಲಿ ಕೆಲವೆಡೆ ಮಳೆ ಕೊರತೆ:

ಕೃಷಿಗೆ ಮಳೆಯನ್ನೇ ನೆಚ್ಚಿಕೊಂಡಿರುವ ಕೇಂದ್ರ ಭಾರತದ ಪ್ರದೇಶಗಳಲ್ಲಿ ಸತತ ಮೂರನೇ ವರ್ಷವೂ ಉತ್ತಮ ಮಳೆಯಾಗುತ್ತಿದೆ ಎಂದು ವರದಿ ತಿಳಿಸಿದೆ. ಆದರೆ ಉತ್ತರ ಪ್ರದೇಶದ ಪೂರ್ವ ಭಾಗ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ಕೆಲವೆಡೆ ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಅಂಕಿ–ಅಂಶ ತೋರಿಸಿದೆ.

ಹರಿಯಾಣ, ಪಂಜಾಬ್‌, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಕೊರತೆ ಪ್ರಮಾಣ ಶೇ 35ರಿಂದ ಶೇ 45ರಷ್ಟಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.