ನವದೆಹಲಿ: 2023–24ನೇ ಸಾಲಿಗೆ ಸಂಬಂಧಿಸಿ, ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನೆ ದಾಖಲೆಯ ಗರಿಷ್ಠ ₹1.27 ಲಕ್ಷ ಕೋಟಿಯಷ್ಟು ತಲುಪಿತ್ತು. ಜೊತೆಗೆ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯೂ ಉತ್ಪಾದನೆಯು ಹೊಸ ಮೈಲಿಗಲ್ಲು ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
‘ರಕ್ಷಣಾ ಕ್ಷೇತ್ರದ ಉತ್ಪಾದನೆಯಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ.
2022–23ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರದ ಉತ್ಪಾದನೆ ₹1,08,684 ಕೋಟಿ ಇತ್ತು.
ಈ ಬೆಳವಣಿಗೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಸಾಧನೆ ಸಾಕಾರಗೊಳ್ಳುವುದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ರಕ್ಷಣಾ ಕ್ಷೇತ್ರದಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಅಗತ್ಯವಿರುವ ವಾತಾವರಣವನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ.
‘ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪಾದನೆಯಲ್ಲಿ ತೊಡಗಿರುವ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳು (ಡಿಪಿಎಸ್‌ಯು) ಹಾಗೂ ಇತರ ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಪಡೆದ ಮಾಹಿತಿ ಪ್ರಕಾರ, 2022–23ನೇ ಸಾಲಿಗೆ ಹೋಲಿಸಿದರೆ 2023–24ನೇ ಸಾಲಿನ ರಕ್ಷಣಾ ಉತ್ಪಾದನೆಯಲ್ಲಿ ಶೇ 16.7ರಷ್ಟು ಪ್ರಗತಿ ಕಂಡುಬಂದಿದೆ’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಕ್ಷಣಾ ಕ್ಷೇತ್ರದಲ್ಲಿನ ಈ ಸಾಧನೆಯು ನಮ್ಮ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದೆನರೇಂದ್ರ ಮೋದಿ ಪ್ರಧಾನಿ
2023–24ನೇ ಸಾಲಿನ ಒಟ್ಟು ರಕ್ಷಣಾ ಉತ್ಪಾದನಾ ಮೌಲ್ಯದಲ್ಲಿ ಡಿಪಿಎಸ್‌ಯು ಹಾಗೂ ಇತರ ಸಾರ್ವಜನಿಕ ವಲಯದ ಉದ್ದಿಮೆಗಳ ಕೊಡುಗೆ ಶೇ 79.2 ಹಾಗೂ ಖಾಸಗಿ ವಲಯದ ಕೊಡುಗೆ ಶೇ 20.8
ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಖಾಸಗಿ ವಲಯದ ಉದ್ದಿಮೆಗಳು ಸ್ಥಿರವಾದ ಪ್ರಗತಿ ದಾಖಲಿಸಿವೆ
2023–24ನೇ ಸಾಲಿನಲ್ಲಿ ರಕ್ಷಣಾ ರಫ್ತು ಪ್ರಮಾಣ ದಾಖಲೆಯ ₹21083 ಕೋಟಿ ಮೌಲ್ಯ ತಲುಪಿತ್ತು. 2022–23ನೇ ಸಾಲಿನ ರಫ್ತು ಪ್ರಮಾಣಕ್ಕೆ ಹೋಲಿಸಿದರೆ ಶೇ 32.5ರಷ್ಟು ಹೆಚ್ಚಳ ಕಂಡುಬಂದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.