ದೆಹಲಿ: ಕೋವಿಡ್ -19 ಪ್ರಕರಣಗಳ ನಿರಂತರ ಕುಸಿತದ ಹಿನ್ನೆಲೆಯಲ್ಲಿ 99 ರಾಷ್ಟ್ರಗಳ ಪ್ರವಾಸಿಗರ ಪ್ರವೇಶಕ್ಕೆ ಭಾರತವು ಅವಕಾಶ ಕಲ್ಪಿಸಿದೆ. 20 ತಿಂಗಳ ಬಳಿಕ ವಿದೇಶಿಯರ ಪ್ರವೇಶಕ್ಕೆ ಭಾರತವು ಮುಕ್ತವಾಗಿದೆ.
‘ವಿದೇಶಿ ಪ್ರಯಾಣಿಕರು ಈಗ ಕಡ್ಡಾಯ ಕ್ವಾರಂಟೈನ್ ಇಲ್ಲದೆ ಭಾರತಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿದ 20 ತಿಂಗಳ ನಂತರ ಸರ್ಕಾರ ಈ ಕ್ರಮ ಕೈಗೊಂಡಿದೆ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್, ಅಮೆರಿಕ, ಇಸ್ರೇಲ್, ಬ್ರೆಜಿಲ್, ಕೆನಡಾ, ಗ್ರೀಸ್, ಕುವೈತ್, ಕೊಲಂಬಿಯಾ, ರಷ್ಯಾ ಮತ್ತು ಜರ್ಮನಿ ಸೇರಿದಂತೆ 99 ದೇಶಗಳ, ಪೂರ್ತಿ ಡೋಸ್ ಪಡೆದ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಈ ರಾಷ್ಟ್ರಗಳು ಈಗಾಗಲೇ ಭಾರತೀಯ ಲಸಿಕೆ ಪ್ರಮಾಣಪತ್ರಗಳನ್ನು ಅಥವಾ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಪಡೆದ ಲಸಿಕೆ ಹಾಕಿದ ಭಾರತೀಯ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ಕಲ್ಪಿಸಿವೆ.
ಈ ದೇಶಗಳ ಪ್ರವಾಸಿಗರು ಭಾರತಕ್ಕೆ ಬಂದ ನಂತರದ 14 ದಿನಗಳ ಕಾಲ ತಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಬೇಕೆಂದು ಸರ್ಕಾರವು ಸೂಚಿಸಿದೆ.
ಕೇವಲ ಒಂದು ಡೋಸ್ ಪಡೆದ ವಿದೇಶಿಯರು ದೇಶ ಪ್ರವೇಶ ಮಾಡಿದರೆ, ವಿಮಾನ ನಿಲ್ದಾಣಗಳಲ್ಲಿ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಏಳು ದಿನಗಳ ಸ್ವಯಂ ಹೋಮ್ ಕ್ವಾರಂಟೈನ್‌ಗೆ ಹೋಗಬೇಕಾಗುತ್ತದೆ. 8 ನೇ ದಿನ, ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮತ್ತೆ ಮಾಡಲಾಗುತ್ತದೆ. ನಂತರ ಅವರು ಮುಕ್ತವಾಗಿ ಓಡಾಡಬಹುದು.
ಎರಡನೇ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲೂ ಪ್ರವಾಸಿ ವ್ಯಕ್ತಿಗೆ ಪಾಸಿಟಿವ್ ಬಂದರೆ, ಅವರು ಇನ್ನೂ ಎಂಟು ದಿನಗಳ ಕಾಲ ಹೋಮ್ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.