ನವದೆಹಲಿ: ಮೇ ತಿಂಗಳಿನಲ್ಲಿ ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಉನ್ನತ ಮಟ್ಟದ ಸಭೆಗೆ ಭಾರತವು ಪಾಕಿಸ್ತಾನ ಹಾಗೂ ಚೀನಾಗೆ ಆಹ್ವಾನ ನೀಡಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹಾಗೂ ಚೀನಾದ ವಿದೇಶಾಂಗ ಮಂತ್ರಿ ಕ್ವಿನ್ ಗ್ಯಾಂಗ್ ಅವರನ್ನು ಭಾರತ ಅಹ್ವಾನಿಸಿದೆ.
ಶಾಂಘೈ ಸಹಕಾರ ಸಂಸ್ಥೆಯು 8 ರಾಷ್ಟ್ರಗಳ ಒಕ್ಕೂಟವಾಗಿದ್ದು, ಈ ಬಾರಿ ಭಾರತಕ್ಕೆ ಅಧ್ಯಕ್ಷತೆ ಲಭಿಸಿದೆ. ಮೇ ತಿಂಗಳ ಮೊದಲ ವಾರದಲ್ಲಿ ಈ ಸಭೆ ನಡೆಯಲಿದೆ.
ಇನ್ನು ಈ ಸಭೆಯಲ್ಲಿ ಭಾಗಿಯಾಗುವುದರ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಉತ್ತರ ಬಂದಿಲ್ಲ. ಸಂಸ್ಥೆಯ ರೀತಿ ರಿವಾಜುಗಳಿಗೆ ಅನುಗುಣವಾಗಿ ಆಹ್ವಾನ ನೀಡಲಾಗಿದೆ.
ಒಂದು ವೇಳೆ ಬಿಲಾವಲ್ ಅವರು ಈ ಸಭೆಗೆ ಬಂದಿದ್ದೇ ಆದಲ್ಲಿ, 2011ರ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಾಕಿಸ್ತಾನದ ಮೊದಲ ವಿದೇಶಾಂಗ ಮಂತ್ರಿ ಎನಿಸಿಕೊಳ್ಳಲಿದ್ದಾರೆ.
ಮಾರ್ಚ್‌ನಲ್ಲಿ ಈ ರಾಷ್ಟ್ರಗಳ ಮುಖ್ಯನ್ಯಾಯಮೂರ್ತಿಗಳ ಸಭೆಯೂ ಇದ್ದು, ಅದಕ್ಕೂ ಕೂಡ ಆಹ್ವಾನ ನೀಡಿ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಗೆ ಪತ್ರಿಕೆ ಕಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.