ನವದೆಹಲಿ: ಭಾರತ ಮತ್ತು ಸಿಂಗಪುರ ದೇಶಗಳ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಹೊಂದುವ ದೃಷ್ಟಿಕೋನದಿಂದ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ ಎಂದು ವರದಿಯಾಗಿದೆ.
ಇಲ್ಲಿ ನಡೆದ ಆರನೇ ಭಾರತ-ಸಿಂಗಪುರ ರಕ್ಷಣಾ ಸಂವಾದ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಜಂಟಿ ಮಿಲಿಟರಿ ತರಬೇತಿ ಸೇನೆಯ ದ್ವಿಪಕ್ಷೀಯ ಒಪ್ಪಂದವನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಭದ್ರತೆಯ ದೃಷ್ಟಿಕೋನದಿಂದಾಗಿ ದೀರ್ಘಾವಧಿಯ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಮುಂದುವರಿಸಲು ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ಒದಗಿಸುವ ಇಂಗಿತವನ್ನು ವ್ಯಕ್ತಪಡಿಸಿವೆ.
ರಕ್ಷಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಹಾಗೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಸ್ಪರ ಸಹಕಾರವನ್ನು ಉಭಯ ರಾಷ್ಟ್ರಗಳು ವ್ಯಕ್ತಪಡಿಸಿದ್ದು, ಯಾಂತ್ರೀಕೃತ ಮತ್ತು ಕೃತಕ ಬುದ್ಧಿಮತ್ತೆಯನ್ನು ಉತ್ತೇಜಿಸುವ ಸಲುವಾಗಿ ಉದ್ಯಮ ಕ್ಷೇತ್ರದಲ್ಲೂ ಬಾಂಧವ್ಯ ಹೊಂದಲು ಮಾತುಕತೆ ನಡೆಸಿದವು.
ಸೈಬರ್ ಭದ್ರತೆಯ ಕ್ಷೇತ್ರಗಳಲ್ಲಿಯೂ ಸಹಕಾರವನ್ನು ಮುಂದುವರಿಸಲು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಂಗಪುರದ ರಕ್ಷಣಾ ಸಚಿವ ಎನ್.ಜಿ ಇಂಗ್ ಹೆನ್ ಒಪ್ಪಂದ ಮಾಡಿಕೊಂಡರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.