ನವದೆಹಲಿ: ದೇಶದಲ್ಲಿ ದೆಹಲಿ, ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ವಾಡಿಕೆಗಿಂತಲೂ ಹೆಚ್ಚಾಗಿರುವ ಮಳೆ ಕಲ್ಲಿದ್ದಲು ಪೂರೈಕೆ ಮೇಲೆ ಪರಿಣಾಮ ಬೀರಿರುವುದು, ಆಮದು ಕಲ್ಲಿದ್ದಲು ಅವಲಂಬಿಸಿದ್ದ ಸ್ಥಾವರಗಳು ಕಲ್ಲಿದ್ದಲು ದರ ಏರಿಕೆಯಿಂದಾಗಿ ಉತ್ಪಾದನೆ ಕಡಿತಗೊಳಿಸಿರುವುದು ಇದಕ್ಕೆ ಕಾರಣವಾಗಿದೆ.
ಕಲ್ಲಿದ್ದಲು ಉತ್ಪಾದನೆ ತೃಪ್ತಿಕರವಾಗಿದ್ದರೂ ಮಳೆಯಿಂದಾಗಿ ಸರಬರಾಜು ವ್ಯತ್ಯಯವಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡಿನಲ್ಲಿ ವಿದ್ಯುತ್ ಸಮಸ್ಯೆ ತೋರುವ ಸೂಚನೆಗಳು ಇವೆ.
ಇರುವ ಕಲ್ಲಿದ್ದಲು ದಾಸ್ತಾನು ಒಂದೆರಡು ದಿನಗಳಿಗೆ ಸಾಕಾಗಬಹುದು. ಹೀಗಾಗಿ, ವಿದ್ಯುತ್ ಉತ್ಪಾದನೆ ಸ್ಥಗಿತವಾಗಬಹುದು ಎಂಬ ಎಚ್ಚರಿಕೆಯನ್ನು ವಿವಿಧ ಖಾಸಗಿ ಶಾಖೋತ್ಪನ್ನ ಸ್ಥಾವರಗಳ ಅಧಿಕಾರಿಗಳು, ಪೂರೈಕೆದಾರರು ನೀಡಿದ್ದಾರೆ.
ಆದರೆ, ಕಲ್ಲಿದ್ದಲು ಸಚಿವಾಲಯವು ದೇಶದಲ್ಲಿ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ ಎಂದು ಹೇಳಿದ್ದು, ಪೂರ್ಣವಾಗಿ ವಿದ್ಯುತ್ ಉತ್ಪಾದನೆ ಸ್ಥಗಿತವಾಗಲಿದೆ ಎಂಬ ಆತಂಕಕ್ಕೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿದೆ.
ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯು ವಿದ್ಯುತ್ ಬಿಕ್ಕಟ್ಟನ್ನು ಎದುರಿಸುವ ಸಂಭವ ಇದೆ. ಇಂತಹ ಪರಿಸ್ಥಿತಿ ನಿವಾರಣೆಗೆ ತಮ್ಮ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಮತ್ತಷ್ಟು ನೆರವಿನ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ನಗರಕ್ಕೆ ವಿದ್ಯುತ್ ಪೂರೈಸುವ ವಿದ್ಯುತ್ ಘಟಕಗಳಿಗೆ ಸಮರ್ಪಕವಾಗಿ ಕಲ್ಲಿದ್ದಲು ಮತ್ತು ಅನಿಲ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.