ADVERTISEMENT

ನಿಜ್ಜರ್ ಹತ್ಯೆ ಪ್ರಕರಣ: ಕೆನಡಾ ಜತೆ ಜಟಾಪಟಿ; ಹೈಕಮಿಷನರ್ ವಾಪಸ್ ಕರೆಸಿಕೊಂಡ ಭಾರತ

ಪಿಟಿಐ
Published 15 ಅಕ್ಟೋಬರ್ 2024, 1:30 IST
Last Updated 15 ಅಕ್ಟೋಬರ್ 2024, 1:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವುದಾಗಿ ಭಾರತ ಸೋಮವಾರ ಹೇಳಿದೆ. ಈ ಬೆಳವಣಿಗೆಯು ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡುವಂತೆ ಮಾಡಿದೆ.

ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣ ದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿದೆ. ಅದರ ಬೆನ್ನಲ್ಲೇ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹಿಂದೆ ಆರೋಪಿಸಿದ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀವ್ರ ಬಿಗಡಾಯಿಸಿತ್ತು. 

‘ನಮ್ಮ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆಯ ಖಾತರಿಯನ್ನು ಈಗಿನ ಕೆನಡಾ ಸರ್ಕಾರ ನೀಡಬಹುದು ಎಂಬ ನಂಬಿಕೆಯಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ. ‘ಆದ್ದರಿಂದ, ಹೈಕಮಿಷನರ್ ಮತ್ತು ಕೆನಡಾ ಗುರಿಯಾಗಿಸಿಕೊಂಡಿರುವ ಇತರ ರಾಜತಾಂತ್ರಿಕ ಅಧಿಕಾರಿ
ಗಳನ್ನು ವಾಪಸ್‌ ಕರೆಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಹೇಳಿದೆ.

ಸಚಿವಾಲಯವು ಇದಕ್ಕೂ ಮೊದಲು ಪ್ರಕಟಣೆಯಲ್ಲಿ, ‘ಭಾರತವು ಕೆನಡಾದಿಂದ ಭಾನುವಾರ ರಾಜತಾಂತ್ರಿಕ ಪತ್ರವೊಂದನ್ನು ಸ್ವೀಕರಿಸಿದೆ. ಆ ದೇಶದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಬೇಕಾಗಬಹುದು ಎಂದು ಅದರಲ್ಲಿ ತಿಳಿಸಲಾಗಿದೆ’ ಎಂದು ಹೇಳಿತ್ತು.

ಅಸಂಬದ್ಧ ಆರೋಪ: ಹೈಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಅವರ ವಿರುದ್ಧ ಮಾಡಿರುವ ಆರೋಪಗಳನ್ನು ಭಾರತವು ‘ಅಸಂಬದ್ಧ’ ಎಂದು  ತಿರಸ್ಕರಿಸಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ‘ಈ ಅರೋಪವು ಜಸ್ಟಿನ್‌ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಯ ಒಂದು ಭಾಗ’ ಎಂದು ತಿರುಗೇಟು ನೀಡಿದೆ.

ಭಾರತದ ರಾಜತಾಂತ್ರಿಕರ ವಿರುದ್ಧ ಆರೋಪಗಳನ್ನು ಹೊರಿಸಲು ಕೆನಡಾ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಮುಂದಿನ ಕ್ರಮವನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತವು ಕಾಯ್ದಿರಿಸಿದೆ ಎಂದು ಸ್ಪಷ್ಟಪಡಿಸಿದೆ.

‘ಟ್ರುಡೊ ಅವರು 2023ರ ಸೆಪ್ಟೆಂಬ‌ರ್‌ನಲ್ಲಿ ಕೆಲವು ಆರೋಪಗಳನ್ನು ಮಾಡಿದ್ದರು. ನಮ್ಮ ವಿನಂತಿಯ ಹೊರತಾಗಿಯೂ ಕೆನಡಾ ಸರ್ಕಾರ ಆ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವನ್ನೂ ನಮ್ಮ ಜತೆ ಹಂಚಿಕೊಂಡಿಲ್ಲ’ ಎಂದು ಸಚಿವಾಲಯ ಹೇಳಿದೆ.

ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು 2023ರ ಜೂನ್ 18ರಂದು ವ್ಯಾಂಕೋವರ್‌ನ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ನಾಲ್ವರನ್ನು ಬಂಧಿಸಲಾಗಿದೆ.

ಕೆನಡಾ ಹೈಕಮಿಷನರ್‌ಗೆ ಸಮನ್ಸ್

ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ಕೆನಡಾದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ, ನವದೆಹಲಿಯಲ್ಲಿರುವ ಕೆನಡಾ ಡೆಪ್ಯುಟಿ ಹೈಕಮಿಷನರ್ ಸ್ಟೀವರ್ಟ್‌ ವೀಲರ್‌ ಅವರನ್ನು ಕರೆಸಿ ವಿವರಣೆ ಕೇಳಿದೆ. ಆದರೆ, ‘ಭಾರತ ಕೇಳಿದ ಎಲ್ಲ ಪುರಾವೆಗಳನ್ನು ಒದಗಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತದ ಏಜೆಂಟರ ಪಾತ್ರ ಇರುವುದನ್ನು ಸಾಬೀತುಪಡಿಸುವ ನಂಬಲರ್ಹ ಪುರಾವೆಗಳನ್ನು ಒದಗಿಸಲಾಗಿದೆ’ ಎಂದು ಅವರು ಸೋಮವಾರ ತಿಳಿಸಿದರು.

‘ಹಾಸ್ಯಾಸ್ಪದ ಆರೋಪ’

36 ವರ್ಷಗಳಷ್ಟು ಸೇವಾ ಅನುಭವ ಹೊಂದಿರುವ ಸಂಜಯ್ ಕುಮಾರ್ ವರ್ಮಾ ಅವರು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

‘ಅವರು ಜಪಾನ್ ಮತ್ತು ಸುಡಾನ್‌ನಲ್ಲಿ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಇಟಲಿ, ಟರ್ಕಿ, ವಿಯೆಟ್ನಾಂ ಮತ್ತು ಚೀನಾದಲ್ಲೂ ಕೆಲಸ ಮಾಡಿದ್ದಾರೆ. ಕೆನಡಾ ಸರ್ಕಾರವು ಅವರ ಮೇಲೆ ಮಾಡಿರುವ ಆರೋಪ ಹಾಸ್ಯಾಸ್ಪದವಾಗಿದ್ದು, ಅದನ್ನು ಕಡೆಗಣಿಸಲಾಗುವುದು’ ಎಂದಿದೆ.

ತಲಾ 6 ರಾಜತಾಂತ್ರಿಕರ ಗಡೀಪಾರು

ಭಾರತದ ಆರು ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಸೋಮವಾರ ಗಡೀಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ, ಕೆನಡಾದ ಆರು ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಸೂಚಿಸಿದೆ. ‘ಅಕ್ಟೋಬರ್‌ 19ರ ಒಳಗಾಗಿ ದೇಶ ತೊರೆಯುವಂತೆ ಕೆನಡಾದ ಆರು ಮಂದಿ ರಾಜತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.