ಬಾಲಸೋರ್ (ಒಡಿಶಾ): ಹಲವು ಸ್ವದೇಶಿ ತಂತ್ರಜ್ಞಾನಗಳನ್ನು ಒಳಗೊಂಡಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ‘ಬ್ರಹ್ಮೋಸ್’ ಪರೀಕ್ಷೆಯು ಯಶಸ್ವಿಯಾಗಿ ಒಡಿಶಾದ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ನಡೆಯಿತು.
‘ಆತ್ಮನಿರ್ಭರ ಭಾರತ’ ಗುರಿ ತಲುಪುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ. ‘ಸ್ವದೇಶಿಯಾಗಿ ನಿರ್ಮಿಸಿದ ಬೂಸ್ಟರ್, ಏರ್‌ಫ್ರೇಮ್ ಸೇರಿದಂತೆ ಹಲವು ದೇಶೀಯ ತಂತ್ರಜ್ಞಾನಗಳನ್ನು ಹೊಂದಿರುವ ಕ್ಷಿಪಣಿಯನ್ನು ಬೆಳಗ್ಗೆ10.30ಕ್ಕೆ ಪರೀಕ್ಷಿಸಲಾಯಿತು. 400 ಕಿ.ಮೀ. ದೂರದವರೆಗೂ ಕ್ರಮಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ’ ಎಂದುರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರಕಟಣೆಯಲ್ಲಿ ತಿಳಿಸಿದೆ.
ಕ್ಷಿಪಣಿಯು ಪ್ರತಿ ಗಂಟೆಗೆ ಅಂದಾಜು 3,457 ಕಿ.ಮೀ ವೇಗದಲ್ಲಿ ಗುರಿಯತ್ತ ಚಿಮ್ಮಿದೆ. ‘ಈ ಯಶಸ್ವಿ ಪರೀಕ್ಷೆಯ ಬಳಿಕ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಬೂಸ್ಟರ್ ಹಾಗೂ ಇತರೆ ಉಪಕರಣಗಳನ್ನು ಸರಣಿಯಾಗಿ ಉತ್ಪಾದನೆಗೊಳಿಸಲು ಹಸಿರುನಿಶಾನೆ ಸಿಕ್ಕಂತಾಗಿದೆ.ಜಲಾಂತರ್ಗಾಮಿ, ಯುದ್ಧ ಹಡಗುಗಳು ಮತ್ತು ಯುದ್ಧ ವಿಮಾನಗಳು ಅಥವಾ ನೆಲದಿಂದಲೂ ದಾಳಿ ನಡೆಸಲು ಈ ಕ್ಷಿಪಣಿಗಳನ್ನು ಉಪಯೋಗಿಸಬಹುದಾಗಿದೆ. ’ ಎಂದು ಡಿಆರ್‌ಡಿಒ ತಿಳಿಸಿದೆ.
450 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದಾಳಿ ನಡೆಸುವಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯದ ಪರೀಕ್ಷೆಯನ್ನು 2017ರ ಮಾರ್ಚ್ 11ರಂದು ಕೈಗೊಳ್ಳಲಾಗಿತ್ತು. ಬಳಿಕ, ನೆಲದಿಂದ ಕಡಿಮೆ ದೂರದಲ್ಲಿ ದಾಳಿ ನಡೆಸುವ ಸಾಮರ್ಥ್ಯದ ಬಗ್ಗೆ 2019ರ ಸೆಪ್ಟೆಂಬರ್ 30ರಂದು ನಡೆಸಲಾಗಿತ್ತು.ಡಿಆರ್‌ಡಿಒ ಹಾಗೂ ರಷ್ಯಾದ ಎನ್‌ಪಿಒಎಂ ಸಂಸ್ಥೆಗಳು ಜಂಟಿಯಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ. ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಬಳಿ ಈಗಾಗಲೇ ಕಾರ್ಯಾಚರಣೆಯಲ್ಲಿ ಇರುವ ‘ಬ್ರಹ್ಮೋಸ್’ ಅನ್ನು ಜಗತ್ತಿನಲ್ಲೇ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಎಂದು ಪರಿಗಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.