ನವದೆಹಲಿ: ರಹಸ್ಯ ಕಾರ್ಯಾಚರಣೆ ಅಥವಾ ವಿಧ್ವಂಸಕ ಕೃತಗಳನ್ನು ನಾಶಪಡಿಸುವ ಭಾರತೀಯ ನೌಕಾಪಡೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯ ನೌಕಾ ಆವೃತ್ತಿಯನ್ನು ಭಾನುವಾರ ಅರಬ್ಬೀ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತ್ಯಂತ ಸಂಕೀರ್ಣವಾದ ಕುಶಲ ತಂತ್ರಜ್ಞಾನ ಹೊಂದಿರುವ, ಪಿನ್ – ಪಾಯಿಂಟ್‌ನಷ್ಟು ನಿಖರತೆಯೊಂದಿಗೆ ಗುರಿ ಸಾಧಿಸುವಂತಹ ಈ ಕ್ಷಿಪಣಿಯನ್ನು ಐಎನ್‌ಎಸ್ ಚೆನ್ನೈನಿಂದ ಪರೀಕ್ಷಾರ್ಥವಾಗಿ ಹಾರಿಸಲಾಯಿತು.
ನೌಕಾ ಮೇಲ್ಮೈನಲ್ಲಿರುವ ದೀರ್ಘ ವ್ಯಾಪ್ತಿಯಲ್ಲಿರುವ ಗುರಿಗಳನ್ನು ‘ಬ್ರಹ್ಮೋಸ್ ನಿಖರವಾಗಿ ತಲುಪಲಿದೆ. ಇದು ನೌಕಾಪಡೆಯಲ್ಲಿ ವಿಧ್ವಂಸಕ ಕೃತ್ಯವನ್ನು ತಡೆಯುವ ಮತ್ತೊಂದು ಅಸ್ತ್ರವಾಗಲಿದೆ‘ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಹುತೇಕ ಬಹುಮುಖ ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಬ್ರಹ್ಮೋಸ್ ನೌಕಾ ಆವೃತ್ತಿ ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಳಿಸಿದ ಡಿಆರ್‌ಡಿಒ, ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಭಾರತೀಯ ನೌಕಪಡೆಯ ಸಿಬ್ಬಂದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದರು.
ಭಾರತ-ರಷ್ಯಾ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್, ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತಯಾರಿಸುತ್ತದೆ. ಇದನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ವೇದಿಕೆಗಳಿಂದ ಉಡಾಯಿಸಬಹುದು.
ಡಿಆರ್‌ಡಿಒ ಅಧ್ಯಕ್ಷ ಜಿ.ಸತೀಶ್ ರೆಡ್ಡಿ ಕೂಡ ವಿಜ್ಞಾನಿಗಳು ಮತ್ತು ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿದರು. ‘ಇದು ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹಲವು ರೀತಿಯಲ್ಲಿ ಹೆಚ್ಚಿಸುತ್ತದೆ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.