ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಸೈನಿಕರು ನಡೆಸಿದ ಅಪ್ರಚೋದಿತ ದಾಳಿ ಮತ್ತು ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪಾಕ್ ಹೈಕಮಿಷನ್‌ನ ಹಿರಿಯ ರಾಜತಾಂತ್ರಿಕರನ್ನು ಕರೆಸಿಕೊಂಡು ಪ್ರತಿಭಟನೆ ದಾಖಲಿಸಿದೆ.
'ಪಾಕಿಸ್ತಾನದ ಹೈಕಮಿಷನ್‌ನ ಅಧಿಕಾರಿಯನ್ನು ಇಂದು ವಿದೇಶಾಂಗ ಸಚಿವಾಲಯ ಕರೆಸಿಕೊಂಡಿದೆ. ನ. 13 ರಂದು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಅನೇಕ ಕಡೆಗಳಲ್ಲಿ ಪಾಕಿಸ್ತಾನ ಪಡೆಗಳು ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿವೆ. ಇದರ ಪರಿಣಾಮವಾಗಿ ನಾಲ್ವರು ನಾಗರಿಕರು ಸಾವಿಗೀಡಾಗಿದ್ದರೆ, 19 ಮಂದಿ ಗಾಯಗೊಂಡಿದ್ದಾರೆ. ಈ ಬೆಳವಣಿಗೆ ಸಂಬಂಧ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದೆ,' ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಪಾಕಿಸ್ತಾನದ ಸಶಸ್ತ್ರ ಪಡೆಗಳು ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿರುವುದನ್ನು ಭಾರತವು 'ಕಠಿಣ ಪದ'ಗಳಿಂದ ಖಂಡಿಸಿದೆ ಎಂದು ಇಲಾಖೆ ತಿಳಿಸಿದೆ.
ಭಾರತದ ಹಬ್ಬದ ಸಂದರ್ಭವನ್ನು ಬಳಸಿಕೊಂಡು ಪಾಕಿಸ್ತಾನ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ. ನಾಗರಿಕರ ಮೇಲೆ ದಾಳಿ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ನೆರೆ ರಾಜ್ಯದ ರಾಜತಾಂತ್ರಿಕ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಲ್ಲದೆ, ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಉಗ್ರರು ನುಸುಳುತ್ತಿರುವ ವಿಚಾರದ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ, ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟು ಭಾರತಕ್ಕೆ ರವಾನಿಸುತ್ತಿರುವ ಪ್ರಕರಣಗಳನ್ನು ನೆನಪಿಸಿ ಆಕ್ಷೇಪ ವ್ಯಕ್ತಪಡಿಸಿದೆ.
'ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಾರತದ ವಿರುದ್ಧದ ಭಯೋತ್ಪಾದನೆಗೆ ಯಾವುದೇ ರೀತಿಯಲ್ಲಿ ಬಳಸಬಾರದು ಎಂಬ ದ್ವಿಪಕ್ಷೀಯ ಬದ್ಧತೆಯನ್ನು ಪಾಕಿಸ್ತಾನಕ್ಕೆ ಮತ್ತೊಮ್ಮೆ ನೆನಪಿಸಲಾಗಿದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.