ADVERTISEMENT

ರಸ್ತೆ ಯೋಜನೆಗಳಲ್ಲಿ ಚೀನಾ ಕಂಪನಿಗಳಿಗೆ ಅವಕಾಶ ಇಲ್ಲ: ಸಚಿವ ಗಡ್ಕರಿ

ಪಿಟಿಐ
Published 1 ಜುಲೈ 2020, 18:24 IST
Last Updated 1 ಜುಲೈ 2020, 18:24 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ    

ನವದೆಹಲಿ:ಭಾರತ–ಚೀನಾ ಗಡಿ ಬಿಕ್ಕಟ್ಟು ಎರಡೂ ದೇಶಗಳ ನಡುವಣ ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಸುಳಿವನ್ನು ಕೇಂದ್ರರಸ್ತೆ ಸಾರಿಗೆ, ಹೆದ್ದಾರಿ ಮತ್ತು ಎಂಎಸ್‌ಎಂಇ ಸಚಿವ ನಿತಿನ್‌ ಗಡ್ಕರಿ ನೀಡಿದ್ದಾರೆ.

ಭಾರತದ ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಚೀನಾದ ಕಂಪನಿಗಳಿಗೆ ಅವಕಾಶ ಕೊಡುವುದಿಲ್ಲ, ಜಂಟಿ ಯೋಜನೆಗಳಿಂದಲೂ ಚೀನಾವನ್ನು ಹೊರಗೆ ಇಡಲಾಗುವುದು ಎಂದು ಅವರುಹೇಳಿದ್ದಾರೆ.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಂಎಸ್‌ಎಂಇ) ಚೀನಾ ಹೂಡಿಕೆದಾರರು ಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದೂ ಸುದ್ದಿ ಸಂಸ್ಥೆ ಪಿಟಿಐಗೆ ಬುಧವಾರ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ADVERTISEMENT

ಚೀನಾದ ಕಂಪನಿಗಳನ್ನು ನಿಷೇಧಿಸುವ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಭಾಗವಹಿಸುವಿಕೆ ಸಾಧ್ಯವಾಗುವಂತೆ ಮಾನದಂಡಗಳನ್ನು ಸಡಿಲಿಸುವ ನೀತಿಯು ಸದ್ಯವೇ ಪ್ರಕಟವಾಗಲಿದೆ. ಈಗಿನ ಮತ್ತು ಭವಿಷ್ಯದ ಟೆಂಡರ್‌ಗಳಿಗೆ ಇದು ಅನ್ವಯ ಆಗಲಿದೆ. ಈಗಾಗಲೇ ಅಂತಿಮಗೊಂಡ ಟೆಂಡರ್‌ಗಳಲ್ಲಿ ಚೀನಾ ಕಂಪನಿಗಳ ಜಂಟಿ ಸಹಭಾಗಿತ್ವ ಇದ್ದರೆ, ಹೊಸ ಟೆಂಡರ್‌ ಕರೆಯಲಾಗುವುದು ಎಂದೂ ಗಡ್ಕರಿ ವಿವರಿಸಿದ್ದಾರೆ.

ನಮ್ಮ ಕಂಪನಿಗಳೇ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವಂತೆ ತಾಂತ್ರಿಕ ಮತ್ತು ಹಣಕಾಸು ಮಾನದಂಡಗಳನ್ನು ಸಡಿಸಲಿಸಲು ಸಂಬಂಧಪಟ್ಟವರ ಜತೆ ಸಭೆ ನಡೆಸುವಂತೆ ಹೆದ್ದಾರಿ ಇಲಾಖೆಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಗುತ್ತಿಗೆದಾರರೊಬ್ಬರು ಸಣ್ಣ ಯೋಜನೆ ಕೈಗೆತ್ತಿಕೊಳ್ಳಲು ಅರ್ಹರಾಗಿದ್ದರೆ ಅವರು ದೊಡ್ಡ ಯೋಜನೆಗೂ ಅರ್ಹರಾಗಬಹುದು ಎಂದು ಗಡ್ಕರಿ ಹೇಳಿದ್ದಾರೆ.

ಎಂಎಸ್‌ಎಂಇ ಕ್ಷೇತ್ರದಲ್ಲಿ ದೇಶೀ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಗುವುದು. ಹಾಗಿದ್ದರೂ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಲಾಗು
ವುದು. ಆದರೆ, ಚೀನಾದ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡಲಾಗುವುದಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಚೀನಾ ಸರಕು: ಭಾರತದ ಬಂದರುಗಳಲ್ಲಿ ಚೀನಾದ ಸರಕುಗಳನ್ನು ತಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಚೀನಾ ಸರಕುಗಳನ್ನು ಬಂದರುಗಳಲ್ಲಿ ವಿನಾ ಕಾರಣ ತಡೆಯಲಾಗುತ್ತಿಲ್ಲ ಎಂದಿದ್ದಾರೆ. ದೇಶವು ಸ್ವಾವಲಂಬನೆ ಸಾಧಿಸುವುದಕ್ಕಾಗಿ ಎಂಎಸ್‌ಎಂಇ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಸರ್ಕಾರ ತರಲಿದೆ ಎಂದು ಹೇಳಿದ್ದಾರೆ.

‘ಇದೊಂದು ಉತ್ತಮ ಕ್ರಮ. ಚೀನಾದಿಂದ ಆಮದನ್ನು ನಿರುತ್ಸಾಹಗೊಳಿಸಲಾಗುವುದು. ಸ್ವಾವಲಂಬನೆಯ ದಿಸೆಯಲ್ಲಿ ದೇಶವು ದಾಪುಗಾಲು ಹಾಕಲಿದೆ. ನಾನು ಸ್ವಾವಲಂಬಿ ಭಾರತದ ಅತಿ ದೊಡ್ಡ ಪ್ರತಿಪಾದಕ’ ಎಂದಿದ್ದಾರೆ.

ಪರಿಸ್ಥಿತಿಯು ವಿಷಮಗೊಳ್ಳುವುದಕ್ಕೆ ಮೊದಲು, ಅಂದರೆ ಎರಡು ಮೂರು ತಿಂಗಳ ಹಿಂದೆ ಖರೀದಿ ಮಾಡಿದ ಸರಕುಗಳನ್ನು ಬಿಡಿಸಿಕೊಳ್ಳಲು ಅವಕಾಶ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ದಲೈಲಾಮಗೆ ‘ಭಾರತ ರತ್ನ’ ಪ್ರಸ್ತಾವ
ಟಿಬೆಟ್‌ ಮೇಲೆ ಚೀನಾದ ಆಳ್ವಿಕೆಯನ್ನು ವಿರೋಧಿಸುತ್ತಿರುವ ದಲೈಲಾಮ ಅವರಿಗೆ ಭಾರತದ ಅತ್ಯುನ್ನತ ಗೌರವ ‘ಭಾರತ ರತ್ನ’ ನೀಡಿ ಪುರಸ್ಕರಿಸಬೇಕು ಎಂದು ಸಂಘ ಪರಿವಾರದ ಒಂದು ವರ್ಗವು ಒತ್ತಾಯಿಸಿದೆ. ಈ ಮೂಲಕ ಚೀನಾಕ್ಕೆ ಗಟ್ಟಿ ಸಂದೇಶ ರವಾನಿಸಬೇಕು ಎಂಬುದು ಅವರ ಉದ್ದೇಶ.

ಈ ಪ್ರಸ್ತಾವವು ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಶೀಲನೆಯಾಗುತ್ತಿದೆ. ಉನ್ನತ ಹಂತದ ಕೆಲವು ಅಧಿಕಾರಿಗಳು ಪ್ರಸ್ತಾವದ ಪರವಾಗಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಮರುಪರಿಶೀಲಿಸಬೇಕು ಎಂದು ಅಧಿಕಾರಿಗಳ ಇನ್ನೊಂದು ವರ್ಗ ಹೇಳಿದೆ ಎನ್ನಲಾಗಿದೆ. ದಲೈಲಾಮಾ ಅವರಿಗೆ ಭಾರತ ರತ್ನ ನೀಡಿದರೆ, ಚೀನಾ ಅತ್ಯಂತ ಕಟುವಾದ ಪ್ರತಿಕ್ರಿಯೆ ನೀಡಬಹುದು ಎಂಬುದು ಇದಕ್ಕೆ ಕಾರಣ.

ಟಿಬೆಟ್‌ನಿಂದ ತಪ್ಪಿಸಿಕೊಂಡ ದಲೈಲಾಮ ಅವರು 1959ರಿಂದ ಭಾರತದಲ್ಲಿ ನೆಲೆಸಿದ್ದಾರೆ. ಇದೇ 6ರಂದು ಅವರು ಹುಟ್ಟಿದ ದಿನ. ಅಂದು ಅವರಿಗೆ ಸರ್ಕಾರದಿಂದ ಶುಭಾಶಯ ಕೋರುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

‘ಚೀನೀಯರ ಬಗ್ಗೆ ಅಪನಂಬಿಕೆ’
ಚೀನಾದ ಸ್ಥಳೀಯ ಕಮಾಂಡರ್‌ಗಳ ಮೇಲೆ ನಂಬಿಕೆ ಇಲ್ಲ ಎಂಬುದನ್ನು ಮಂಗಳವಾರ ನಡೆದ ಸಭೆಯಲ್ಲಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಚೀನಾ ಸೇನೆಯ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ನಿಯೋಜಿಸಲಾಗಿರುವ ಸೈನಿಕರನ್ನು ತ್ವರಿತ ಮತ್ತು ಹಂತ ಹಂತವಾಗಿ ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಎಲ್‌ಎಸಿಯಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು ಎಂಬುದನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಸೈನಿಕರ ಹಿಂತೆಗೆತದ ಪ್ರತಿ ಹಂತದ ಬಳಿಕ ಹಿರಿಯ ಅಧಿಕಾರಿಗಳು ಅದನ್ನು ದೃಢೀಕರಿಸಬೇಕು. ಬಳಿಕವೇ ಮುಂದಿನ ಹಂತಕ್ಕೆ ಸಾಗಬೇಕು ಎಂಬ ವಿಚಾರದಲ್ಲಿಯೂ ಒಮ್ಮತಕ್ಕೆ ಬರಲಾಗಿದೆ.

‘ವೈಬೊ’ದಿಂದ ಪ್ರಧಾನಿ ಹೊರಕ್ಕೆ
ನಿಷೇಧಿತ ಚೀನಾ ಆ್ಯಪ್ ‘ವೈಬೊ’ದಿಂದ ಪ್ರಧಾನಿ ಹೊರನಡೆದಿದ್ದಾರೆ. ಬುಧವಾರ ಅವರ ವೈಬೊ ಖಾತೆ‌ ಖಾಲಿಯಾಗಿತ್ತು. ಅವರ ಪ್ರೊಫೈಲ್ ಚಿತ್ರ, ಪೋಸ್ಟ್‌ ಹಾಗೂ ಕಮೆಂಟ್‌ ಕಾಣಿಸಲಿಲ್ಲ. ಮೋದಿ ಅವರು ಆ್ಯಪ್ ಅಳಿಸಲು ಬಯಸಿದ್ದರೂ, ಅದು ಸಾಧ್ಯವಾಗಲಿಲ್ಲ. ಅತಿಗಣ್ಯ ವ್ಯಕ್ತಿಗಳ ಖಾತೆಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ ಹಾಗೂ ಅದನ್ನು ಡಿಲೀಟ್ ಮಾಡಲು ಬಳಕೆದಾರರಿಗೆ ಅವಕಾಶ ಇಲ್ಲ. ಅದು ತನ್ನಿಂತಾನೇ ಡಿಲೀಟ್ ಆಗಲಿದೆ. ಹೀಗಾಗಿ ಖಾತೆಯಲ್ಲಿದ್ದ 115 ಪೋಸ್ಟ್‌ಗಳನ್ನು ಮಾತ್ರ ಅಲ್ಲಿಂದ ಒಂದೊಂದಾಗಿ ತೆಗೆದುಹಾಕಲಾಗಿದೆ.

*
ತಂತ್ರಜ್ಞಾನ, ಸಲಹೆ ಅಥವಾ ವಿನ್ಯಾಸದ ವಿದೇಶಿ ಜಂಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿಯೂ ಚೀನಾದ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ.
-ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.