ಪಣಜಿ: ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸೋಮವಾರ ಪಣಜಿಯಲ್ಲಿ ನಡೆದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) 54ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಠಾಕೂರ್, ಮೊದಲ ಬಾರಿಗೆ ಐಎಫ್‌ಎಫ್‌ಐ ಅತ್ಯುತ್ತಮ ವೆಬ್ ಸರಣಿಯ ಒಟಿಟಿ ಪ್ರಶಸ್ತಿಯನ್ನು ನೀಡಲು ನಿರ್ಧರಿಸುವ ಮೂಲಕ, ಕಂಟೆಂಟ್‌ನ ಕ್ರಿಯೇಟರ್‌ಗಳ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದೆ ಎಂದು ತಿಳಿಸಿದರು.
‘ಪ್ರಸ್ತುತ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಮಾಧ್ಯಮ ಮತ್ತು ಮನರಂಜನಾ ಉದ್ಯಮ ವಿಷಯದಲ್ಲಿಯೂ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದು, ವಿಶ್ವದ ಮೂರನೇ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಯಾಗಲಿದೆ’ ಎಂದು ಅವರು ವಿವರಿಸಿದರು.
ಕೋವಿಡ್ ಸಮಯದಲ್ಲಿ ಎಲ್ಲವೂ ಬಂದ್ ಆಗಿದ್ದ ವೇಳೆ ಜನರನ್ನು ರಂಜಿಸಿದ ಒಟಿಟಿಯನ್ನೂ ಐಎಫ್‌ಎಫ್‌ಐನಲ್ಲಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.