ನವದೆಹಲಿ: ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಮಾದರಿ ಪರೀಕ್ಷೆ ಕಿಟ್ ಹಾಗೂ ಅದನ್ನು ತಡೆಯಲು ಪರಿಣಾಮಕಾರಿ ಎನಿಸಿರುವ ಹ್ಯೂಮನ್ ಪಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯನ್ನು ರವಾನಿಸಲು ಭಾರತ ಸಮ್ಮತಿಸಿದೆ.
ಲಸಿಕೆ ಒಕ್ಕೂಟ 'ಗವಿ' ಸಹಯೋಗದಲ್ಲಿ 4 ಕೋಟಿ ಡೋಸ್ ಎಚ್‌ಪಿವಿ ಲಸಿಕೆಯನ್ನು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಒದಗಿಸಲಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಗರ್ಭಕಂಠ ಕ್ಯಾನ್ಸರ್ ಕೊನೆಗೊಳಿಸುವ ನಿಟ್ಟಿನಲ್ಲಿ ತಮ್ಮ 'ಕ್ಯಾನ್ಸರ್ ಮೂನ್‌ಶೂಟ್' ಕಾರ್ಯಕ್ರಮವನ್ನು ವಿಸ್ತರಿಸುವುದಾಗಿ 'ಕ್ವಾಡ್' ಶೃಂಗ ಸಭೆಯಲ್ಲಿ ಶನಿವಾರ ಘೋಷಿಸಿದ್ದರು.
'ಗರ್ಭಕಂಠದ ಕ್ಯಾನ್ಸರ್‌ನಿಂದ ಆರಂಭಿಸಿ ವಿಶ್ವದಾದ್ಯಂತ ಕ್ಯಾನ್ಸರ್ ಕೊನೆಗೊಳಿಸಲು 'ಕ್ವಾಡ್ ಕ್ಯಾನ್ಸರ್ ಮೂನ್‌ಶಾಟ್' ಉಪಕ್ರಮವನ್ನು ಘೋಷಿಸಲು ಹೆಮ್ಮೆಪಡುತ್ತೇನೆ' ಎಂದು ಬೈಡನ್ ಹೇಳಿದ್ದರು.
ಇದಕ್ಕಾಗಿ, ₹ 62 ಕೋಟಿ (75 ಲಕ್ಷ ಡಾಲರ್) ದೇಣಿಗೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರೂ ಹಾಜರಿದ್ದರು.
ಬೈಡನ್ ಅವರು ತಮ್ಮ ಪುತ್ರ ಮೃತಪಟ್ಟ ಬಳಿಕ 2016ರಲ್ಲಿ 'ಕ್ಯಾನ್ಸರ್ ಮೂನ್‌ಶೂಟ್' ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು. ಆಗ ಅವರು (ಬೈಡನ್) ಅಮೆರಿಕದ ಉಪಾಧ್ಯಕ್ಷರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.