ADVERTISEMENT

ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ ಅಗ್ರಸ್ಥಾನ: ಮೋದಿ

ಗೋಧಿ, ಅಕ್ಕಿ ಉತ್ಪಾದನೆಗಿಂತ ಹೆಚ್ಚಿನ ವಹಿವಾಟು

ಪಿಟಿಐ
Published 19 ಏಪ್ರಿಲ್ 2022, 11:38 IST
Last Updated 19 ಏಪ್ರಿಲ್ 2022, 11:38 IST
ಗುಜರಾತಿನ ಬನಸ್ಕಾಂತ ಜಿಲ್ಲೆಯ ದಿಯೊದರದ ಬನಾಸ್ ಡೈರಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು– ಪಿಟಿಐ ಚಿತ್ರ
ಗುಜರಾತಿನ ಬನಸ್ಕಾಂತ ಜಿಲ್ಲೆಯ ದಿಯೊದರದ ಬನಾಸ್ ಡೈರಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು– ಪಿಟಿಐ ಚಿತ್ರ   

ಬನಸ್ಕಾಂತ (ಗುಜರಾತ್): ‘ಭಾರತವು ವಾರ್ಷಿಕವಾಗಿ ₹ 8.5 ಲಕ್ಷ ಕೋಟಿ ಮೌಲ್ಯದ ಹಾಲನ್ನು ಉತ್ಪಾದಿಸುತ್ತಿದ್ದು, ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ ಬನಾಸ್ ಡೈರಿಯ ಹೊಸ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೆಹಲಿಯಿಂದ ಹೊರಟ ನಂತರ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಮಾಜಿ ಪ್ರಧಾನಿಯೊಬ್ಬರು ಹೇಳುತ್ತಿದ್ದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಸಂಪೂರ್ಣ 100 ಪೈಸೆ ಉದ್ದೇಶಿತ ಫಲಾನುಭವಿಗಳಿಗೆ ತಲುಪುತ್ತಿದೆ ಮತ್ತು ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಟೀಕಿಸಿದರು.

‘ಇಂದು ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದು, ಇದು ಗೋಧಿ ಮತ್ತು ಅಕ್ಕಿಯ ವಹಿವಾಟುಗಿಂತಲೂ ಹೆಚ್ಚಾಗಿದೆ. ಸಣ್ಣ ರೈತರು ಸಹಕಾರಿ ಹೈನುಗಾರಿಕೆ ಕ್ಷೇತ್ರದ ದೊಡ್ಡ ಫಲಾನುಭವಿಗಳಾಗಿದ್ದಾರೆ. ಹೈನುಗಾರಿಕೆಯು ವಿಶೇಷವಾಗಿ ಮಹಿಳೆಯರನ್ನು ಸಬಲರನ್ನಾಗಿಸಿದ್ದು, ಗ್ರಾಮದ ಆರ್ಥಿಕತೆಯನ್ನು ಬಲಪಡಿಸುತ್ತದೆ’ ಎಂದರು.

ADVERTISEMENT

ಇದೇ ವೇಳೆ ಪ್ರಧಾನಿಯವರು ಬನಾಸ್ ಸಮುದಾಯ ರೇಡಿಯೊ ಸ್ಟೇಷನ್ ಮತ್ತು ಪಾಲನ್‌ಪುರದಲ್ಲಿ ಚೀಸ್ ಉತ್ಪನ್ನಗಳು, ಹಾಲಿನ ಪುಡಿ ಉತ್ಪಾದನೆಗೆ ವಿಸ್ತೃತ ಸೌಲಭ್ಯಗಳು, ಸಾವಯವ ಗೊಬ್ಬರ ಹಾಗೂ ಜೈವಿಕ ಅನಿಲ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 100 ಟನ್ ಸಾಮರ್ಥ್ಯದ ನಾಲ್ಕು ಗೋಬರ್ ಗ್ಯಾಸ್ ಘಟಕಗಳಿಗೆ ಶಂಕುಸ್ಥಾಪನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.