ನವದೆಹಲಿ: ಗಡಿಯ ಕೆಲವೆಡೆಗಳಲ್ಲಿ ನಿಯೋಜಿಸಿರುವ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಪ್ರಸ್ತಾವವನ್ನು ಭಾರತವು ಚೀನಾದ ಮುಂದೆ ಇರಿಸಿದೆ. ಭಾರತ–ಚೀನಾ ನಡುವಿನ ಕಮಾಂಡರ್ ಮಟ್ಟದ 10ನೇ ಸುತ್ತಿನ ಮಾತುಕತೆ ಶನಿವಾರ ನಡೆಯಿತು. ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಲ್ಲಿರುವ ಸೇನೆಯನ್ನು ಹಿಂಪಡೆಯುವ ಮೂಲಕ ಈ ಪ್ರದೇಶದಲ್ಲಿನ ಉದ್ವಿಗ್ನತೆಯನ್ನು ತಗ್ಗಿಸುವುದು ಮಾತುಕತೆಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಒಪ್ಪಂದದ ಭಾಗವಾಗಿ ಪ್ಯಾಂಗಾಂಗ್ ಸರೋವರ ಪ್ರದೇಶಗಳ ಉತ್ತರ ಮತ್ತು ದಕ್ಷಿಣ ದಂಡೆಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಚೀನಾ ಮತ್ತು ಭಾರತೀಯ ಸೇನೆಗಳು ಪೂರ್ಣಗೊಳಿಸಿದ ಎರಡು ದಿನಗಳ ನಂತರ ಕೋರ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಿತು. ನೈಜ ನಿಯಂತ್ರಣ ರೇಖೆಯ ಚೀನಾದ ಬದಿಯಲ್ಲಿರುವ ಮೊಲ್ಡೊ ಗಡಿ ಬಿಂದುವಿನಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಸಭೆ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ.
ಕಳೆದ 9 ತಿಂಗಳಿನಿಂದ ಬಿಗುವಿನ ಸ್ಥಿತಿಗೆ ಕಾರಣವಾಗಿದ್ದ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ದೆಪ್ಸಾಂಗ್‌ನಲ್ಲಿ ತ್ವರಿತವಾಗಿ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಪ್ರಸ್ತಾವ ಇರಿಸಿತು. ಮಾತುಕತೆಯ ಮುಖ್ಯ ಉದ್ದೇಶ ಇದೇ ಆಗಿತ್ತು.
ಫೆಬ್ರುವರಿ 10ರಂದು ಸೇನಾ ವಾಪಸಾತಿ ಪ್ರಕ್ರಿಯೆ ಶುರುವಾಗಿತ್ತು. ಎರಡೂ ಸೇನೆಗಳು ಈಗ ಹಿಂದೆ ಸರಿದಿವೆ. ಸೇನಾ ವಾಪಸಾತಿ ನಡೆದ 48 ಗಂಟೆಯ ಒಳಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿಗೆ ತಿಳಿಸಿದ್ದರು. ಅದರ ಪ್ರಕಾರ ಮಾತುಕತೆ ನಡೆಯಿತು.
ಶನಿವಾರದ ಮಾತುಕತೆಯಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ಮೂಲದ 14 ಕೋರ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿ.ಜಿ.ಕೆ ಮೆನನ್ ವಹಿಸಿದ್ದರು. ಚೀನಾ ಸೇನೆಯ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಅವರು ಚೀನಾದ ಕಡೆಯ ನೇತೃತ್ವ ವಹಿಸಿದ್ದರು.
ವಿಡಿಯೊ ಹಂಚಿಕೊಂಡ ಚೀನಾ
(ಬೀಜಿಂಗ್ ವರದಿ): ಕಳೆದ ವರ್ಷ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯದ್ದು ಎನ್ನಲಾದ ವಿಡಿಯೊವನ್ನು ಚೀನಾದ ಸರ್ಕಾರಿ ಸುದ್ದಿಸಂಸ್ಥೆ ಬಿಡುಗಡೆ ಮಾಡಿದೆ.
ಘರ್ಷಣೆಯಲ್ಲಿ ಚೀನಾ ಕಡೆಯ ನಾಲ್ವರು ಸೈನಿಕರು ಹತರಾಗಿದ್ದಾರೆ ಎಂದು ಚೀನಾ ಶುಕ್ರವಾರವಷ್ಟೇ ಬಹಿರಂಗಪಡಿಸಿತ್ತು. ಈ ಘಟನೆಯಲ್ಲಿ ಭಾರತವು 20 ಸೈನಿಕರನ್ನು ಕಳೆದುಕೊಂಡಿತ್ತು.
ಹಿಮಾವೃತ ಕಾರಕೋರಂ ಪರ್ವತ ಸಾಲಿನಲ್ಲಿ ಚೀನಾದ ಸೈನಿಕರ ಕಡೆಗೆ ಕಟ್ಟಿಗೆ ಹಾಗೂ ಗುರಾಣಿ ಹಿಡಿದಿದ್ದ ಭಾರತೀಯ ಸೈನಿಕರ ದಂಡು ಸಂಚರಿಸುತ್ತಿರುವ ದೃಶ್ಯವು ಶನಿವಾರ ಬಿಡುಗಡೆ ಮಾಡಲಾದ ವಿಡಿಯೊದಲ್ಲಿದೆ. ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಎರಡೂ ಕಡೆಯ ಸೈನಿಕರು ಬಂದೂಕುಗಳನ್ನು ಬಳಸುವಂತಿಲ್ಲ. ಹೀಗಾಗಿ ಈ ಭಾಗದಲ್ಲಿ ದೊಣ್ಣೆ, ಕಲ್ಲು ಹಿಡಿದು ಸೈನಿಕರು ಹೊಡೆದಾಡುತ್ತಾರೆ.
‘ಅವರು ಈಗ ಇಲ್ಲಿನ ಮತ್ತೊಂದು ಹೊಸ ಟೆಂಟ್‌ಗೆ ಸ್ಥಳಾಂತರವಾಗಿದ್ದಾರೆ’ ಎಂದು ಚೀನಾದ ಒಬ್ಬ ಸೈನಿಕ ಹೇಳಿರುವ ಧ್ವನಿ ವಿಡಿಯೊದಲ್ಲಿ ಇದೆ. ಚೀನಾದ ಸೈನಿಕರನ್ನು ‘ಪ್ರಚೋದಿಸಲು’ ಭಾರತೀಯ ಸೈನಿಕರು ಗಡಿ ದಾಟಿ ಬಂದಿದ್ದಾರೆ ಎಂಬುದನ್ನು ತೋರಿಸುವುದು ವಿಡಿಯೊ ಬಿಡುಗಡೆಯ ಹಿಂದಿನ ಉದ್ದೇಶ ಎನ್ನಲಾಗಿದೆ.
ಮತ್ತೊಂದು ವಿಡಿಯೊ ತುಣುಕಿನಲ್ಲಿ ಎರಡೂ ಕಡೆಯ ಸೈನಿಕರು ಕತ್ತಲೆಯಲ್ಲಿ ಘರ್ಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ನೆಲದ ಮೇಲೆ ರಕ್ತ ಸೋರುತ್ತಾ ಬಿದ್ದಿದ್ದ ಒಬ್ಬ ವ್ಯಕ್ತಿಗೆಚೀನಾದ ಸೈನಿಕರು ಚಿಕಿತ್ಸೆ ನೀಡುತ್ತಿರುವ ದೃಶ್ಯವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.