ADVERTISEMENT

2.24 ಲಕ್ಷ ಜನರಿಗೆ ಲಸಿಕೆ, 447 ಜನರಲ್ಲಿ ಅಡ್ಡಪರಿಣಾಮದ ವರದಿ: ಕೇಂದ್ರ

ಏಜೆನ್ಸೀಸ್
Published 17 ಜನವರಿ 2021, 18:56 IST
Last Updated 17 ಜನವರಿ 2021, 18:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೋವಿಡ್‌ ಲಸಿಕೆ ವಿತರಣೆ ಅಭಿಯಾನದ ಮೊದಲ ದಿನ 2,07,229 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಬಗ್ಗೆ ಭಾನುವಾರ ಸಂಜೆ ಮಾಧ್ಯಮಗೋಷ್ಠಿ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆಯು, 'ಕೋವಿಡ್‌ ಲಸಿಕೆ ವಿತರಣೆ ಅಭಿಯಾನದ ಮೊದಲ ದಿನ 2,07,229 ಮಂದಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ ಅಭಿಯಾನದ ಮೊದಲ ದಿನ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಸಂಖ್ಯೆಯು ಬ್ರಿಟನ್‌, ಅಮೆರಿಕ ಮತ್ತು ಪ್ರಾನ್ಸ್‌ಗಿಂತ ಅಧಿಕವಾಗಿದೆ' ಎಂದು ಹೇಳಿದೆ.

'ಲಸಿಕೆ ವಿತರಣೆ ಅಭಿಯಾನದ ಮೊದಲ ದಿನದಂದು ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಾಂಡಗಳಲ್ಲಿ ಕೆಲ ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ, ಅವುಗಳನ್ನು ಶೀಘ್ರವಾಗಿ ಪರಿಹರಿಸಲಾಯಿತು' ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಎರಡನೇ ದಿನ ಒಟ್ಟು 17,000 ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿದ ನಂತರ 447 ಮಂದಿಯ ಮೇಲೆ ದುಷ್ಪರಿಣಾಮವಾಗಿದೆ, ಅದರಲ್ಲಿ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಟ್ಟು 2,934 ಕೇಂದ್ರಗಳನ್ನು ತೆರೆಯಲಾಗಿದ್ದು, ಒಂದು ಕೇಂದ್ರದಲ್ಲಿ ಗರಿಷ್ಠ 100 ಮಂದಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು.

ಲಸಿಕೆ ಹಾಕುವವರಿಗೆ ಸರ್ಕಾರ ಈಗಾಗಲೇ ತರಬೇತಿ ನೀಡಿದೆ. ಲಸಿಕೆ ನೀಡುವವರು ಮತ್ತು ಲಸಿಕಾ ಕೇಂದ್ರವನ್ನು ನಿರ್ವಹಿಸುವವರಿಗೆ ವಿವರವಾದ ಸೂಚನೆಗಳನ್ನು ನೀಡಲಾಗಿದೆ. ವೈದ್ಯಕೀಯ ಅಧಿಕಾರಿಗಳು, ವ್ಯಾಕ್ಸಿನೇಟರ್‌, ಹೆಚ್ಚುವರಿ ವ್ಯಾಕ್ಸಿನೇಟರ್‌, ಲಸಿಕೆ ತಲುಪಿಸುವವರು (ಕೋಲ್ಡ್ ಚೈನ್ ಹ್ಯಾಂಡ್ಲರ್‌), ಮೇಲ್ವಿಚಾರಕರು, ಡೇಟಾ ವ್ಯವಸ್ಥಾಪಕರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕೊಡಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ 2,360 ಜನರು ತರಬೇತಿ ಪಡೆದಿದ್ದಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 719 ಜಿಲ್ಲೆಗಳಲ್ಲಿ 57,000 ಮಂದಿಗೆ ಚುಚ್ಚುಮದ್ದು ನೀಡುವ ತರಬೇತಿ ಕೊಡಲಾಗಿದೆ. ಒಟ್ಟಾರೆ ದೇಶದಾದ್ಯಂತ 96 ಸಾವಿರ ಮಂದಿಗೆ ತರಬೇತಿ ಸಿಕ್ಕಿದೆ. ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದ ಗೊಂದಲಗಳಿದ್ದರೆ 104 ಸಹಾಯವಾಣಿಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.