ನವದೆಹಲಿ: ಜಿ–20 ಶೃಂಗ ಸಭೆಯಲ್ಲಿ ಭಾಗಿಯಾಗುವ ನಾಯಕರಿಗೆ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್ ಆಫ್ ಭಾರತ್’ ಎನ್ನುವ ಹೆಸರಿನಲ್ಲಿ ರಾಷ್ಟ್ರಪತಿಗಳು ನೀಡಿರುವ ಔತಣಕೂಟದ ಆಹ್ವಾನ ಪತ್ರಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಈ ನಡೆಗೆ ‘ಇಂಡಿಯಾ’ ಒಕ್ಕೂಟದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದರಿಂದ ಭಯಪಟ್ಟುಕೊಂಡಿದ್ದು, ಇಂಡಿಯಾ ಹಾಗೂ ಭಾರತ್ ಅನ್ನು ನಮ್ಮ ಹೃದಯಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಇಂಡಿಯಾ ಒಕ್ಕೂಟದ ನಾಯಕರು ಹೇಳಿದ್ದಾರೆ.
ಆಹ್ವಾನ ಪತ್ರಿಕೆ ಬಹಿರಂಗವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಮನೋಜ್ ತಿವಾರಿ, ಸಂವಿಧಾನದ 52ನೇ ಪರಿಚ್ಛೇದದಲ್ಲಿ ‘There shall be a president of india’ ಎಂದಿದೆ. ‘ಇದಕ್ಕಿಂತ ಹೆಚ್ಚು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಇಂಡಿಯಾ ಒಕ್ಕೂಟವೂ ಭಾರತ್ ಎಂದು ಮರುನಾಮಕರಣ ಮಾಡಿದರೆ ಅವರೂ ಹಾಗೆ ಮಾಡುತ್ತಾರೆಯೇ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
‘ವಿನಾಶಕಾರಿ ತಲೆ ಮಾತ್ರವೇ ಜನರನ್ನು ಹೇಗೆ ವಿಭಜನೆ ಮಾಡಬಹುದು ಎಂದು ಯೋಚಿಸಲು ಸಾಧ್ಯ. ಅವರು ಮತ್ತೊಮ್ಮೆ ಭಾರತೀಯರು ಹಾಗೂ ಇಂಡಿಯನ್ಸ್ ನಡುವೆ ಬಿರುಕು ಉಂಟು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯದರ್ಶಿ (ಸಂಘಟನೆ) ವೇಣುಗೋಪಾಲ್ ಹೇಳಿದ್ದಾರೆ.
‘ನಾವೆಲ್ಲಾ ಒಂದೇ ಎನ್ನುವುದು ಸ್ಪಷ್ಟ. ಸಂವಿಧಾನದ 1ನೇ ವಿಧಿ ಪ್ರಕಾರ ಭಾರತ ರಾಜ್ಯಗಳ ಒಕ್ಕೂಟ. ಇಂಡಿಯಾ ಮೈತ್ರಿಕೂಟದಿಂದ ಭಯಪಟ್ಟು ಈ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಮೋದಿಯವರೇ ಯಾವ ಪ್ರಯತ್ನವೂ ಬೇಕಿದ್ದರೂ ಮಾಡಿ. ಭಾರತ ಒಂದಾಗಲಿದೆ. ಇಂಡಿಯಾ ಗೆಲ್ಲಲಿದೆ’ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಈ ನಿಲುವನ್ನು ಬೆಂಬಲಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ‘ರಿಪಬ್ಲಿಕ್ ಆಫ್ ಭಾರತ್ –– ನಮ್ಮ ನಾಗರೀಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್‌ನ ಸಂವಹನ ವಿಭಾಗದ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಸರ್ಕಾರದ ಈ ನಡೆಯನ್ನು ಟೀಕಿಸಿದ್ದು, ‘ಮೋದಿಯವರು ಇತಿಹಾಸವನ್ನು ತಿರುಚಬಹುದು. ಭಾರತವನ್ನು ವಿಭಜಿಸಬಹುದು. ಭಾರತ ರಾಜ್ಯಗಳ ಒಕ್ಕೂಟ. ಇಂಡಿಯಾ ಮೈತ್ರಿಕೂಟ ಪಕ್ಷಗಳ ಧ್ಯೇಯೋದ್ದೇಶ ಏನು? ಅದು BHARAT (Bring Harmony, Amity, Reconciliation And Trust) ಸಾಮರಸ್ಯ, ಸೌಹಾರ್ದತೆ, ಸಮನ್ವಯ ಮತ್ತು ವಿಶ್ವಾಸವನ್ನು ತರುವುದು. ಭಾರತ ಒಂದಾಗಲಿದೆ. ಇಂಡಿಯಾ ಗೆಲ್ಲಲಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಬಿಜೆಪಿ INDIAವನ್ನು ಅಳಿಸಿಹಾಕಲು ಹೇಗೆ ಸಾಧ್ಯ? ದೇಶ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದುದ್ದು ಅಲ್ಲ. ದೇಶ 135 ಕೋಟಿ ಭಾರತೀಯರದ್ದು. ಮನಸೋಇಚ್ಛೆ ಮತ್ತು ಕಲ್ಪನೆಗಳ ಮೇಲೆ ಮಾರ್ಪಾಡು ಮಾಡಲು ನಮ್ಮ ರಾಷ್ಟ್ರೀಯ ಅಸ್ಮಿತೆ ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ. ಭಾರತ ಒಂದಾಗಲಿದೆ. ಇಂಡಿಯಾ ಗೆಲ್ಲಲಿದೆ’ ಎಂದು ಹೇಳಿದ್ದಾರೆ.
ವಿವಿಧತೆಯಲ್ಲಿ ಏಕತೆ ಎಂಬ ಭಾರತದ ತಳಹದಿಯ ತತ್ವವನ್ನು ಬಿಜೆಪಿ ಇನ್ನಷ್ಟು ಕೆಳಮಟ್ಟಕ್ಕೆ ಕೊಂಡೊಯ್ದಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಹಿಂದೂಸ್ತಾನದ ಹೆಸರನ್ನು ಭಾರತ ಎಂದು ಮಾಡಿರುವುದು ಸಣ್ಣತನ ಮತ್ತು ಅಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
‘ಅಧೀಕೃತ ಹೆಸರುಗಳಲ್ಲಿ ಒಂದಾಗಿರುವ ಭಾರತ್ ಎಂದು ಕರೆಯಲು ಯಾವುದೇ ಸಂವಿಧಾನಿಕ ವಿರೋಧಗಳಿಲ್ಲ. ಆದರೆ ಶತಮಾನಗಳಿಂದ ನಿರ್ಮಿಸಲಾದ ಅಗಣಿತ ಬ್ರಾಂಡ್ ಮೌಲ್ಯವನ್ನು ಹೊಂದಿರುವ ಇಂಡಿಯಾವನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಮೂರ್ಖತನ ಸರ್ಕಾರ ಪ್ರದರ್ಶಿಸುವುದಿಲ್ಲ ಎನ್ನುವ ಭರವಸೆ ಇದೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಅಲ್ಲದೆ ಎರಡೂ ಹೆಸರುಗಳನ್ನು ನಾವು ಬಳಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.