ನವದೆಹಲಿ : ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ‘ಬೂದು ಪಟ್ಟಿ’ಗೆ ಸೇರಿಸಿರುವ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್) ಕ್ರಮವನ್ನು ಭಾರತ ಸ್ವಾಗತಿಸಿದೆ.
ಪ್ಯಾರಿಸ್‌ನಲ್ಲಿ ನಡೆದ ಕಾರ್ಯಪಡೆಯ ಅಧಿವೇಶನದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಮಾವೇಶದಲ್ಲಿ ಪಾಕಿಸ್ತಾನದ ಹಣಕಾಸು ಸಚಿವ ಶಾಮ್ದಾರ್ ಅಕ್ಬರ್ ಸಹ ಭಾಗವಹಿಸಿದ್ದರು.
ಅಂತರ್ ಸರ್ಕಾರಿ ಸಂಘಟನೆಯಾಗಿರುವ ಎಫ್ಎಟಿಎಫ್ ಅನ್ನು 1989 ರಲ್ಲಿ ಸ್ಥಾಪಿಸಲಾಗಿದೆ. ಅಕ್ರಮ ಹಣ ವರ್ಗಾವಣೆ, ಉಗ್ರರಿಗೆ ಹಣಕಾಸು ಪೂರೈಕೆ ತಡೆ ಮತ್ತು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಬೆದರಿಕೆ ಒಡ್ಡುವ ಕೃತ್ಯಗಳನ್ನು ತಡೆಯುವ ಕೆಲಸವನ್ನು ಈ ಕಾರ್ಯಪಡೆ ಮಾಡುತ್ತಿದೆ.
‘ಕಾರ್ಯಪಡೆಯ ಸೂಚನೆಯಂತೆ, ಉಗ್ರರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಗಟ್ಟಲು ಪಾಕಿಸ್ತಾನ ಕಾಲಮಿತಿಯೊಳಗೆ ಹಾಗೂ ನಂಬಲರ್ಹ ಕ್ರಮಗಳ ಮೂಲಕ ಕಾರ್ಯಪ್ರವೃತ್ತವಾಗುತ್ತದೆ ಎಂಬ ಭರವಸೆ ಹೊಂದಿದ್ದೇವೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರವೀಶ್‌ಕುಮಾರ್ ಹೇಳಿದ್ದಾರೆ.
‘2008ರಲ್ಲಿ ಮುಂಬೈ ಮೇಲಾದ ಉಗ್ರರ ದಾಳಿ ಸೇರಿದಂತೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿರುವ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಶಿಕ್ಷಿಸುವಂತೆ ಭಾರತ ಒತ್ತಾಯಿಸುತ್ತಲೇ ಬಂದಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಭಾರಯ ಜಾಗತಿಕ ಸಮುದಾಯವನ್ನು ಒತ್ತಾಯಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.