ಗುರುಗ್ರಾಮ: ‘ಭಯೋತ್ಪಾದನೆ ಹಾಗೂ ಆಂತರಿಕ ಭದ್ರತೆಯ ಸವಾಲನ್ನು ಭಾರತ ಎದುರಿಸುತ್ತಲೇ ಇದೆ ಮತ್ತು ಭವಿಷ್ಯದಲ್ಲೂ ಎದುರಿಸಲಿದ್ದು, ಭಾರತದ ಭದ್ರತಾ ಪಡೆಗಳು ಒಗ್ಗೂಡಿ ಈ ಸವಾಲಿನ ವಿರುದ್ಧ ಹೋರಾಡಲಿವೆ’ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮಂಗಳವಾರ ತಿಳಿಸಿದರು.
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಇಲ್ಲಿನ ಮನೇಸರ್‌ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಪೊಲೀಸ್ ಕಮಾಂಡೊ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಭಯೋತ್ಪಾದನಾ ದಾಳಿ ನಡೆಯುವ ‘ಸಾಧ್ಯತೆ’ಯನ್ನು ತಳ್ಳಿಹಾಕುವಂತಿಲ್ಲ. ಆದರೆ, ಗುಪ್ತಚರ ಇಲಾಖೆ ಹಾಗೂ ಭದ್ರತಾ ಪಡೆಗಳು ಇಂಥ ಹಲವು ‘ಸಾಧ್ಯತೆ’ಗಳನ್ನು ವಿಫಲಗೊಳಿಸಿದ್ದೇವೆ’ ಎಂದು ಪ್ರಶಂಸಿಸಿದರು.
‘ಡ್ರೋನ್ ಬಳಕೆ, ಅಂತರ್ಜಾಲ, ಸೈಬರ್‌ಸ್ಪೇಸ್ ಹಾಗೂ ಸಾಮಾಜಿಕ ಜಾಲತಾಣಗಳಂಥ ಹೊಸ ಯುಗದ ತಂತ್ರಜ್ಞಾನದ ಮೂಲಕ ಶತ್ರಗಳು ದಾಳಿ ನಡೆಸುತ್ತಿದ್ದಾರೆ. ಇದರ ವಿರುದ್ಧ ಎನ್‌ಎಸ್‌ಎಯು ವಿಶೇಷ ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಇದು ಶ್ಲಾಘನೀಯ’ ಎಂದರು.
‘ಚೀನಾ, ಪಾಕ್ ಗಡಿ: ಪರಿಸ್ಥಿತಿ ನಿಯಂತ್ರಣದಲ್ಲಿ’
‘ಚೀನಾದೊಂದಿಗಿನ ಲಡಾಖ್ ಉದ್ದಕ್ಕೂ ಇರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎನ್‌ಎಸಿ) ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದ್ದು, ಉಗ್ರರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯುವ ಪ್ರಯತ್ನ ಸಾಗಿದೆ’ ಎಂದು ಸೇನೆಯ ಉತ್ತರ ವಿಭಾಗದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದರು.
ಇಲ್ಲಿನ ಡಿಗಿಯಾನದ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಘಟಕದಲ್ಲಿ ಆಯೋಜಿಸಿದ್ದ ‘ನಿವೃತ್ತ ಸೇನಾಧಿಕಾರಿಗಳ ಜೊತೆ’ ರ್‍ಯಾಲಿಯಲ್ಲಿ ಅವರು ಮಾತನಾಡಿದರು.
‘ಚೀನಾದೊಂದಿಗೆ ಹಲವು ಹಂತದ ಮಾತುಕತೆಗಳು ನಡೆಯುತ್ತಿದ್ದು, ಸೇನೆಯು ಸನ್ನದ್ಧ ಸ್ಥಿತಿಯಲ್ಲಿದೆ. ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ನಿರಂತರವಾಗಿ ಕದನವಿರಾಮ ಉಲ್ಲಂಘಟನೆ ನಡೆಯುತ್ತಿದೆ. ಜೊತೆಗೆ, ಭಾರತದ ಗಡಿಯೊಳಗೆ ನುಸುಳುವ ಯತ್ನವನ್ನು ನಮ್ಮ ಸೇನೆ ತಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.