ಕೋಲ್ಕತ್ತ (ಪಿಟಿಐ): 2024ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವು ಬಿಜೆಪಿಯನ್ನು ಮಣಿಸುವ ಅಚಲ ವಿಶ್ವಾಸ ವ್ಯಕ್ತಪಡಿಸಿ, ‘ಜೀತೆಗಾ ಭಾರತ’ ಘೋಷಣೆ ಪ್ರತಿಧ್ವನಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದಾರೆ.
ಇಲ್ಲಿ ಪಕ್ಷದ ಹುತಾತ್ಮರ ವಾರ್ಷಿಕ ದಿನದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ‘ಯಾವುದೇ ಹುದ್ದೆಯನ್ನು ಕೇಳುವುದಕ್ಕಿಂತ ಹೆಚ್ಚಾಗಿ ಮೈತ್ರಿಕೂಟದ ಗೆಲುವಿನ ಮೇಲೆ ತಮ್ಮ ಏಕೈಕ ಗಮನವಿದೆ’ ಎಂದು ಒತ್ತಿ ಹೇಳಿದರು.
‘ನಾವು ಯಾವುದೇ ಹುದ್ದೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದಲ್ಲಿ ಶಾಂತಿ ನೆಲೆಸಬೇಕು ಮತ್ತು ಬಿಜೆಪಿಯನ್ನು ಹೊರಹಾಕಬೇಕೆಂದು ಮಾತ್ರ ನಾವು ಬಯಸುತ್ತೇವೆ. ಬಿಜೆಪಿ ಸರ್ಕಾರವು ಎಲ್ಲ ಸಭ್ಯತೆಯ ಮಿತಿಗಳನ್ನು ಮೀರಿದೆ. ಜನರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಸಮಯ ಬಂದಿದೆ. 26 ರಾಜಕೀಯ ಪಕ್ಷಗಳು ರೂಪಿಸಿರುವ ಮೈತ್ರಿ ಬಗ್ಗೆ ನನಗೆ ಸಂತಸವಿದೆ. ಇನ್ನು ಮುಂದೆ ನಮ್ಮ ಘೋಷಣೆ ‘ಜೀತೆಗಾ ಭಾರತ’ ಆಗಿರುತ್ತದೆ. ಮುಂದಿನ ಎಲ್ಲಾ ಕಾರ್ಯಕ್ರಮಗಳು ‘ಇಂಡಿಯಾ’ ಬ್ಯಾನರ್ ಅಡಿ ನಡೆಯಲಿವೆ’ ಎಂದು ಅವರು ಹೇಳಿದರು.
ಮಣಿಪುರ ಬಿಕ್ಕಟ್ಟಿನ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಮತಾ, ಬಿಜೆಪಿಯ ‘ಬೇಟಿ ಬಚಾವೋ’ ಯೋಜನೆಯು ಈಗ ‘ಬೇಟಿ ಜಲಾವೋ’(ನಮ್ಮ ಹೆಣ್ಣುಮಕ್ಕಳನ್ನು ಸುಟ್ಟುಹಾಕಿ) ಆಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.
ಜನಾಂಗೀಯ ಕಲಹವು 160ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಮಣಿಪುರಕ್ಕೆ ಕೇಂದ್ರ ತಂಡಗಳನ್ನು ಕಳುಹಿಸಲು ಕೇಂದ್ರ ಸರ್ಕಾರ ಚಿಂತಿಸದಿರುವುದು ಅಚ್ಚರಿ ಮೂಡಿಸಿದೆ ಎಂದು ಮಮತಾ ವಾಗ್ದಾಳಿ ಮಾಡಿದರು.
ವಿರೋಧ ಪಕ್ಷದ ನಾಯಕರು ಈಶಾನ್ಯ ರಾಜ್ಯದ ಪ್ರತಿಯೊಬ್ಬ ನಾಗರಿಕರ ಪರವಾಗಿ ನಿಂತಿದ್ದಾರೆ. ಮಣಿಪುರದೊಂದಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ ಎಂದು ಶ್ಲಾಘಿಸಿದರು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.