ರಾಜ್‌ಕೋಟ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್‌ಎಸ್‌ಸಿ) ಭಾರತವು ಖಂಡಿತಾ ಖಾಯಂ ಸದಸ್ಯತ್ವ ಪಡೆಯಲಿದೆ. ಅದಕ್ಕಾಗಿ ದೇಶವು ಈ ಬಾರಿ ಪರಿಶ್ರಮ ಪಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಬುದ್ಧಿಜೀವಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುಎನ್‌ಎಸ್‌ಸಿಯಲ್ಲಿ ಭಾರತವು ಖಾಯಂ ಸದಸ್ಯತ್ವ ಪಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.
80 ವರ್ಷಗಳ ಹಿಂದೆ ವಿಶ್ವ ಸಂಸ್ಥೆ ಸ್ಥಾಪನೆಯಾಗಿದ್ದು, ಚೀನಾ, ಫ್ರಾನ್ಸ್, ರಷ್ಯಾ ಫೆಡರೇಶನ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ತಮ್ಮನ್ನು ತಾವು ಭದ್ರತಾ ಮಂಡಳಿಯ ಖಾಯಂ ಸದಸ್ಯರೆಂದು ಘೋಷಿಸಿಕೊಂಡಿವೆ. ಆ ಸಮಯದಲ್ಲಿ ವಿಶ್ವದಲ್ಲಿ 50 ಸ್ವತಂತ್ರ ದೇಶಗಳಿದ್ದವು. ಕ್ರಮೇಣ ಅವುಗಳ ಸಂಖ್ಯೆ 193ಕ್ಕೆ ಏರಿಕೆಯಾಗಿದೆ. ಆದರೆ, ಈ ಐದು ರಾಷ್ಟ್ರಗಳು ಮಾತ್ರ ವಿಶ್ವಸಂಸ್ಥೆ ಮೇಲೆ ನಿಯಂತ್ರಣ ಹೊಂದಿವೆ. ಯಾವುದೇ ರಾಷ್ಟ್ರಕ್ಕೆ ಭದ್ರತಾ ಮಂಡಳಿಯ ಸ್ಥಾನ ಮತ್ತು ಇತರೆ ಬದಲಾವಣೆ ತರಲು ಈ ರಾಷ್ಟ್ರಗಳ ಅನುಮತಿ ಪಡೆಯಬೇಕೆಂಬುದು ವಿಚಿತ್ರ ಎನಿಸುತ್ತದೆ. ಕೆಲವರು ಅನುಮತಿ ನೀಡುತ್ತಾರೆ. ಮತ್ತೆ ಕೆಲವರು ಹಿಂಬದಿಯಿಂದ ತಮ್ಮ ಕರಾಮತ್ತು ತೋರಿಸುತ್ತಾರೆ. ಕೆಲ ವರ್ಷಗಳಿಂದ ಇದೇ ನಡೆಯುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.
‘ಆದರೆ, ಈಗ ಇದು ಬದಲಾಗಬೇಕು, ಭಾರತಕ್ಕೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡಬೇಕೆಂಬ ಭಾವನೆ ವಿಶ್ವದೆಲ್ಲೆಡೆ ಇದೆ. ಈ ಭಾವನೆ ಪ್ರತೀ ವರ್ಷ ಹೆಚ್ಚಾಗಿರುವುದನ್ನು ನಾನು ಕಂಡಿದ್ದೇನೆ’ ಎಂದು ಜೈಶಂಕರ್ ಹೇಳಿದ್ಧಾರೆ.
‘ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವನ್ನು ನಾವು ಖಂಡಿತಾ ಹೊಂದುತ್ತೇವೆ. ಆದರೆ, ದೊಡ್ಡ ಸಾಧನೆಯು ಪರಿಶ್ರಮ ಇಲ್ಲದೆ ಆಗುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ಭಾರತ, ಜಪಾನ್, ಜರ್ಮನಿ ಮತ್ತು ಈಜಿಪ್ಟ್ ರಾಷ್ಟ್ರಗಳು ಒಟ್ಟಿಗೆ ಪ್ರಸ್ತಾವನೆ ಸಲ್ಲಿಸಲಿದ್ದು, ನಮ್ಮ ಬೇಡಿಕೆಗೆ ಬಲ ಸಿಗಲಿದೆ ಎಂದಿದ್ದಾರೆ.
‘ವಿಶ್ವಸಂಸ್ಥೆ ದುರ್ಬಲವಾಗಿದೆ ಎಂಬ ಭಾವನೆ ಮೂಡಿದೆ. ಉಕ್ರೇನ್ ಯುದ್ಧ ಮತ್ತು ಗಾಜಾ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಸಂದರ್ಭ ನಾವು ಒತ್ತಡ ಮುಂದುವರಿಸಬೇಕು. ವಿಶ್ವಸಂಸ್ಥೆ ದುರ್ಬಲವೆಂಬ ಭಾವನೆ ಹೆಚ್ಚಾದಂತೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗುವ ಸಾಧ್ಯತೆಯೂ ಹೆಚ್ಚುತ್ತದೆ’ ಎಂದು ಜೈಶಂಕರ್ ಹೇಳಿದ್ದಾರೆ.
ಜರ್ಮನಿಯಲ್ಲಿ ಭಾರತದ ದಂಪತಿಯಿಂದ ಅಹಿಹಾ ಶಾ ಎಂಬ ಹೆಣ್ಣುಮಗುವನ್ನು ಅಧಿಕಾರಿಗಳು ತೆಗೆದುಕೊಂಡು ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ವೈಯಕ್ತಿಕ ಮಾಹಿತಿ ಇದ್ದು, ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.