ಲಡಾಖ್: ಚೀನಾ ಗಡಿಯ ಸನಿಹ ಭಾರತೀಯ ವಾಯುಪಡೆಯ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ರಷ್ಯಾ ನಿರ್ಮಿತ ಎಸ್‌ಯು 30 ಎಂಕೆಐ ಮತ್ತು ಮಿಗ್-29 ಯುದ್ಧ ವಿಮಾನಗಳ ಹಾರಾಟ ಎದ್ದು ಕಾಣುವಂತಿದೆ.
ಮುಂಚೂಣಿ ವಾಯುನೆಲೆಗೆ ಭೇಟಿ ನೀಡಿದ್ದ ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಅಮೆರಿಕ ನಿರ್ಮಿತ ಸಿ-17, ಮತ್ತು ಸಿ-130ಜೆ, ರಷ್ಯಾ ನಿರ್ಮಿತ ಇಲ್ಯುಶಿನ್-76 ಮತ್ತು ಅಂಟೊನೊವ್-32 ಸರಕು ಸಾಗಣೆ ವಿಮಾನಗಳ ಹಾರಾಟವೂ ಕಂಡುಬಂತು ಎಂದು ದಾಖಲಿಸಿದ್ದಾರೆ. ಪತ್ರಕರ್ತರು ಭೇಟಿ ನೀಡಿದ ವಾಯುನೆಲೆಯ ಹೆಸರನ್ನು ಸುದ್ದಿಸಂಸ್ಥೆ ಬಹಿರಂಗಪಡಿಸಿಲ್ಲ.
ಸರಕು ಸಾಗಣೆ ವಿಮಾನಗಳ ಮಹತ್ವದ ಪಾತ್ರ
ಭದ್ರತಾ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ವಿವಿಧ ನೆಲೆಗಳಿಂದ ಮುಂಚೂಣಿ ನೆಲಗಳಿಗೆ ನಿಯೋಜಿಸಲು ಸರಕು ಸಾಗಣೆ ವಿಮಾನಗಳನ್ನು ಬಳಸಲಾಗುತ್ತಿದೆ.
ಪೂರ್ವ ಲಡಾಖ್ ವಿಭಾಗದಲ್ಲಿ ಹೆಲಿಕಾಪ್ಟರ್‌ಗಳನ್ನು ಗಸ್ತು ಕಾರ್ಯ ಹೆಚ್ಚಾಗಿ ಬಳಸಲಾಗುತ್ತಿದೆ. ಭದ್ರತಾ ನಿಯೋಜನೆ ಹೆಚ್ಚಿಸಲು ಚಿನೂಕ್ ಹೆಲಿಕಾಪ್ಟರ್‌ಗಳ ಬಳಕೆಯೂ ವ್ಯಾಪಕವಾಗಿದೆ.
'ಚೀನಾ ಗಡಿಯ ಕಾರ್ಯಾಚರಣೆಯಲ್ಲಿ ಈ ವಾಯುನೆಲೆಯು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಎಂಥದ್ದೇ ಪರಿಸ್ಥಿತಿ ಎದುರಿಸಲು ಭಾರತೀಯ ವಾಯುಪಡೆ ಸನ್ನದ್ಧ ಸ್ಥಿತಿಯಲ್ಲಿದೆ' ಎಂದು ವಾಯುನೆಲೆಯಲ್ಲಿ ವಿಂಗ್ ಕಮಾಂಡರ್ ಒಬ್ಬರು ಹೇಳಿದರು ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.
ಚಿನೂಕ್ ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳ ಜೊತೆಗೆ ರಷ್ಯಾ ನಿರ್ಮಿತ ಎಂಐ-17 ವಿ5 ಹೆಲಿಕಾಪ್ಟರ್‌ಗಳನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಸೇನೆ ಮತ್ತು ಐಟಿಬಿಪಿ ತುಕಡಿಗಳನ್ನು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಮುಂಚೂಣಿ ಸ್ಥಳಗಳಿಗೆ ತಲುಪಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.
ಅತ್ತ ಚೀನಾ ಪಾಳಯದಲ್ಲಿಯೂ ಭಾರತದ ಗಡಿಗೆ ಸನಿಹದಲ್ಲಿಯೇ ಯುದ್ಧ ವಿಮಾನಗಳ ಹಾರಾಟ ವರದಿಯಾಗುತ್ತಿದೆ. ಜೂನ್ 15ರ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾದ ನಂತರ ಭಾರತೀಯ ಸೇನೆ ಮತ್ತು ವಾಯುಪಡೆಗಳು ಯುದ್ಧೋಪಕರಣ ಮತ್ತು ಸಿಬ್ಬಂದಿ ನಿಯೋಜನೆಯನ್ನು ಹೆಚ್ಚಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.