ಪಾಕಿಸ್ತಾನದ ಸೇನೆಕಾರ್ಗಿಲ್ಅತಿಕ್ರಮಣ ಮಾಡಿದ ಸಂದರ್ಭದ ಗುಪ್ತಚರ ವೈಫಲ್ಯ ಹಾಗೂ ಮರುವಶಪಡಿಸಿಕೊಳ್ಳುವ ವೇಳೆ ಭಾರತೀಯ ಸೇನೆ ಎದುರಿಸಿದ ಸವಾಲುಗಳು ಏನೆಂಬುದು ಇನ್ನೂ ನಮ್ಮ ಕಣ್ಣಮುಂದಿದೆ. ಈ ಘಟನೆಯ ಬಳಿಕ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಕೆಲ ಮಟ್ಟಿನ ಸುಧಾರಣೆಗಳಾಗಿರುವುದು ನಿಜ. ಆದರೆ, ಭದ್ರತೆಗೆ ಸಂಬಂಧಿಸಿ ಕೆ.ಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿರುವ ಶಿಫಾರಸುಗಳೆಲ್ಲವೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿವೆಯೇ?
ಗುಣಮಟ್ಟದ ಯುದ್ಧ ಸಾಮಗ್ರಿ ಕೊರತೆ, ಆಡಳಿತದ ಸಂರಚನೆಯಲ್ಲಿರುವ ಲೋಪಗಳು ಒಟ್ಟು ಸೇನಾ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತಿದೆ. ಭಾರತೀಯ ಸೇನೆಯು ದಶಕಗಳಿಂದಲೂ ಈ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದೆ.
‘ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒಎಫ್‌ಬಿ) ಸರಬರಾಜು ಮಾಡುತ್ತಿರುವ ಯುದ್ಧ ಸಾಮಗ್ರಿಗಳು ಕಡಿಮೆ ಗುಣಮಟ್ಟದ್ದಾಗಿದ್ದು, ಇದರಿಂದಾಗಿ ಯುದ್ಧನೌಕೆ, ಬಂದೂಕುಗಳು ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳು ಹಾನಿಗೊಳಗಾಗುತ್ತಿವೆ. ಇವುಗಳಿಂದ ಅವಘಡಗಳು ಸಹ ಸಂಭವಿಸುತ್ತಿವೆ’ ಎಂದು ಸೇನಾಪಡೆ ಹೇಳಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಯುದ್ಧಸಾಮಗ್ರಿಗಳ ಗುಣಮಟ್ಟ ಕುರಿತು ರಕ್ಷಣಾ ಇಲಾಖೆ ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಸೇನಾಪಡೆ ಮನವಿಯನ್ನೂ ಮಾಡಿತ್ತು. ಈ ಕುರಿತು ಇಲಾಖೆ ಪರಿಶೀಲನೆ ನಡೆಸಿದಾಗ, ಶಸ್ತ್ರಾಸ್ತ್ರಗಳ ಗುಣಮಟ್ಟ ಸುಧಾರಣೆಗೆ ಒಎಫ್‌ಬಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಬೆಳಕಿಗೆ ಬಂದಿತ್ತು. ಇದು ಒಂದು ಉದಾಹರಣೆಯಷ್ಟೆ. ಇಂತಹ ಅನೇಕ ಲೋಪ–ದೋಷಗಳನ್ನು ಸೇನೆ ಎದುರಿಸುತ್ತಿದೆ. ಸೇನಾ ಆಡಳಿತ ಸಂರಚನೆಯೂ ಬಹಳ ವರ್ಷಗಳ ಹಿಂದಿನ ಮಾದರಿಯಲ್ಲಿದ್ದು ಬದಲಾದ ಸನ್ನಿವೇಶಕ್ಕೆ ತಕ್ಕುದಾಗಿಲ್ಲ’ ಎಂದೂ ಅನೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚೀನಾಗೂ ನಮಗೂ ಇರುವ ವ್ಯತ್ಯಾಸ: ಭಾರತದ ಗಡಿಗೆ ಸಂಬಂಧಿಸಿದ ಚೀನಾದ ನಾಲ್ಕು ಮುಂಚೂಣಿ ನೆಲೆಗಳ ಸೇನಾ ಪಡೆಗಳಿಗೆಲ್ಲ ಒಬ್ಬರೇ (ಕಮಾಂಡರ್) ಮುಖ್ಯಸ್ಥರಾಗಿದ್ದಾರೆ. ತುರ್ತು ಸಂದರ್ಭಗಳಲ್ಲಿ ಹಾಟ್‌ಲೈನ್ ಮೂಲಕ ಅವರೊಬ್ಬರನ್ನೇ ಸಂಪರ್ಕಿಸಿ ಸಲಹೆ ಪಡೆಯುವ ವ್ಯವಸ್ಥೆ ಅಲ್ಲಿದೆ.
ಆದರೆ ಭಾರತದ ಸೇನಾ ವ್ಯವಸ್ಥೆ ಬೇರೆಯೇ ರೀತಿಯಿದೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಭೂತಾನ್ ಪ್ರದೇಶವು ‘ಪೂರ್ವ ಸೇನಾ ಕಮಾಂಡರ್’ ನಿಯಂತ್ರಣದಲ್ಲಿದೆ. ಕೇಂದ್ರ ವಲಯ (ಉತ್ತರಾಖಂಡ), ಹಿಮಾಚಲ ಪ್ರದೇಶ ಮತ್ತು ಟಿಬೆಟ್ ಗಡಿ ಪ್ರದೇಶ ‘ಪಶ್ಚಿಮ ಸೇನಾ ಕಮಾಂಡರ್’, ಕಾಶ್ಮೀರ ಮತ್ತು ಲಡಾಖ್ ಪ್ರದೇಶ ‘ಉತ್ತರ ಸೇನಾ ಕಮಾಂಡರ್’ ಉಸ್ತುವಾರಿಯಲ್ಲಿದೆ. ವಾಯುಪಡೆ ಮತ್ತು ನೌಕಾಪಡೆಗಳೂ ಇದೇ ಮಾದರಿಯ ನಿಯಂತ್ರಣಕ್ಕೆ ಒಳಪಟ್ಟಿವೆ. ಅಂದರೆ, ಭಾರತದ ಕನಿಷ್ಠ ಎಂಟು ಮಂದಿ ತ್ರೀಸ್ಟಾರ್ ಕಮಾಂಡರ್‌ಗಳು ಸೇರಿಕೊಂಡು ಚೀನಾದ ಒಬ್ಬ ಕಮಾಂಡರ್‌ನ ವಿರುದ್ಧ ಸೇನಾ ಕಾರ್ಯಚರಣೆಯ ವ್ಯೂಹ ರಚಿಸುವ ವ್ಯವಸ್ಥೆ ಇದೆ. ಇದನ್ನು ಇಂದಿನ ಅವಶ್ಯಕತೆಗೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಇದನ್ನೂ ಓದಿ:ಸೈನಿಕರ ‘ಗೃಹ’ಬಲ
‘ಇಂತಹ ಸೇನಾ ವ್ಯವಸ್ಥೆಯಿಂದಾಗಿ ಚೀನಾಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಸಮಸ್ಯೆ ಸೃಷ್ಟಿಯಾದಾಗಲೆಲ್ಲ ಚೀನಾದ ಕಮಾಂಡರ್‌ಗಳ ಜತೆ ಯಾರು ಮಾತನಾಡಬೇಕು ಎನ್ನುವುದು ಭಾರತದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಭಾರತದ ಸೇನಾ ಪ್ರಧಾನ ಕಚೇರಿಯಲ್ಲಿನ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರು, ಚೀನಾದ ಕಮಾಂಡರ್ ಜತೆ ಮಾತನಾಡುವ ಸಂದರ್ಭ ಉದ್ಭವಿಸಿದರೆ ಸಹಜವಾಗಿಯೇ ಶಿಷ್ಟಾಚಾರದ ಸಮಸ್ಯೆ ಎದುರಾಗುತ್ತದೆ’ ಎಂದು ಹಿರಿಯ ಪತ್ರಕರ್ತ ಶೇಖರ್ ಗುಪ್ತ ಕಳೆದ ವರ್ಷ ತಮ್ಮ ಅಂಕಣ ‘ರಾಷ್ಟ್ರಕಾರಣ’ ದಲ್ಲಿ ವಿಶ್ಲೇಷಿಸಿದ್ದರು.
ಇದನ್ನೂ ಓದಿ:ಕಾರ್ಗಿಲ್ ಯುದ್ಧದಿಂದ ಪಾಠ ಕಲಿಯದ ಪಾಕಿಸ್ತಾನ
ಸಮಿತಿಗಳು, ಶಿಫಾರಸುಗಳು ಮತ್ತು ಸುಧಾರಣೆ: ಕಾರ್ಗಿಲ್ ಯುದ್ಧಾನಂತರ ಸೇನಾ ಸುಧಾರಣೆಗೆ ಸಂಬಂಧಿಸಿದಂತೆ ಕೆ. ಸುಬ್ರಹ್ಮಣ್ಯಂ ಸಮಿತಿ ಸೇರಿದಂತೆ ಅನೇಕ ಸಮಿತಿಗಳು ರಚನೆಯಾಗಿವೆ. ಈ ಪೈಕಿ, ನರೇಶ್ ಚಂದ್ರ ಮತ್ತು ಶೇಕತ್ಕರ್ ಸಮಿತಿ ಪ್ರಮುಖವಾದವು. ಸೇನೆಯಲ್ಲಿ ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿ ನರೇಶ್ ಚಂದ್ರ ಸಮಿತಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದ್ದರೆ, ವೆಚ್ಚ ಕಡಿಮೆ ಮಾಡುವುದು, ಬಜೆಟ್, ಯುದ್ಧೋಪಕರಣಗಳ ಗುಣಮಟ್ಟ ಸುಧಾರಣೆ ವಿಷಯಗಳಿಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೇಕತ್ಕರ್ ಸಮಿತಿ ಸಲಹೆ ನೀಡಿತ್ತು.
ರಕ್ಷಣಾ ಸಚಿವಾಲಯದ ವೆಚ್ಚವನ್ನು ತಗ್ಗಿಸುವುದು ಹೇಗೆ ಎಂಬ ಸಲಹೆಗಳನ್ನು ನೀಡುವುದು ಶೇಕತ್ಕರ್ ಸಮಿತಿಯ ಹೊಣೆಗಳಲ್ಲಿ ಮುಖ್ಯವಾದುದಾಗಿತ್ತು. 2016ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಈ ಸಮಿತಿ, ‘ರಕ್ಷಣಾ ಸಚಿವಾಲಯಕ್ಕೆ ದೊರಕುವ ಬಹುಪಾಲು ಅನುದಾನವು ವೇತನ ಮತ್ತು ಪಿಂಚಣಿ ನೀಡುವುದಕ್ಕೆ ವ್ಯಯವಾಗುತ್ತಿದೆ. ಹಾಗಾಗಿ ಸೇನೆಯ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಬೇಕಾದಷ್ಟು ನಿಧಿ ದೊರೆಯುತ್ತಿಲ್ಲ’ ಎಂದು ಹೇಳಿತ್ತು. ಈ ಸಮಿತಿ ಒಟ್ಟು 99 ಶಿಫಾರಸುಗಳುಳ್ಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಪೈಕಿ 65 ಶಿಫಾರಸುಗಳ ಅನುಷ್ಠಾನಕ್ಕೆ ಸರ್ಕಾರ ಒಪ್ಪಿಕೊಂಡಿದೆ.
‘2019ರ ಕೊನೆಯೊಳಗೆ ಶೇಕತ್ಕರ್ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಅದರ ಮೊದಲ ಹೆಜ್ಜೆಯಾಗಿ 57 ಸಾವಿರ ಅಧಿಕಾರಿಗಳ ಮರು ನಿಯೋಜನೆ ನಡೆಯಲಿದೆ’ ಎಂದು 2017ರ ಆಗಸ್ಟ್ 31ರಂದು ರಕ್ಷಣಾ ಸಚಿವಾಲಯ ತಿಳಿಸಿತ್ತು. ಪೂರೈಕೆ, ಬೆಂಬಲ ವ್ಯವಸ್ಥೆ ಹಾಗೂ ಹೋರಾಟ (ಸೇನಾ ಭಾಷೆಯಲ್ಲಿ ಇದನ್ನು ಟೈಲ್ ಎಂಡ್ ಟೂತ್ ಎಂದು ಕರೆಯಲಾಗುತ್ತದೆ. ಟೈಲ್ (ಬಾಲ) ಎಂದರೆ ಬೆಂಬಲ ವ್ಯವಸ್ಥೆ ಮತ್ತು ಟೂತ್ (ಹಲ್ಲು) ಎಂದರೆ ಹೋರಾಟ ನಡೆಸುವ ಸೈನಿಕರು) ನಡೆಸುವ ಯೋಧರ ನಡುವೆ ಉತ್ತಮ ಸಮನ್ವಯ ಸಾಧ್ಯವಾಗುವಂತೆ ಮಾಡಲು 57 ಸಾವಿರ ಅಧಿಕಾರಿಗಳ ಮರು ನಿಯೋಜನೆ ನಿರ್ಧಾರಕ್ಕೆ ಬರಲಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಇಂತಹ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದೂ ಸರ್ಕಾರ ತಿಳಿಸಿತ್ತು.
ಅನುದಾನ ಹೆಚ್ಚಳ: ರಕ್ಷಣಾ ಕ್ಷೇತ್ರಕ್ಕೆ ನಿಗದಿಪಡಿಸಲಾಗುವ ಅನುದಾನದಲ್ಲಿ ಕೇಂದ್ರ ಸರ್ಕಾರ ಈ ವರ್ಷ (2019–20ನೇ ಹಣಕಾಸು ವರ್ಷ) ಅಲ್ಪ ಹೆಚ್ಚಳ ಮಾಡಿರುವುದು ಗಮನಾರ್ಹ. ಈ ವರ್ಷ ರಕ್ಷಣಾ ಕ್ಷೇತ್ರಕ್ಕೆ ₹3.18 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ (ಕಳೆದ ಹಣಕಾಸು ವರ್ಷದಲ್ಲಿ ಈ ಮೊತ್ತ ₹ 2.98 ಲಕ್ಷ ಕೋಟಿ ಆಗಿತ್ತು). ನಿಗದಿತ ಅನುದಾನದಲ್ಲಿ ₹ 1,08,248 ಕೋಟಿ ಬಂಡವಾಳ ಉದ್ದೇಶದ್ದಾಗಿದೆ.
ಮಾಹಿತಿ: ವಿವಿಧ ವೆಬ್ ಸೈಟ್‌ಗಳು
ಇಡೀ ದೇಶ ಕಾರ್ಗಿಲ್ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳುಪ್ರಜಾವಾಣಿ ಜಾಲತಾಣದಲ್ಲಿನಿಮಗಾಗಿ...
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.