ADVERTISEMENT

ಪೂರ್ವ ಲಡಾಖ್‌ನಲ್ಲಿ ಭಾರತದಿಂದ ಗಸ್ತು ತಿರುಗುವ ಕಾರ್ಯ ಆರಂಭ: ಸೇನಾ ಮೂಲಗಳು

ಪಿಟಿಐ
Published 1 ನವೆಂಬರ್ 2024, 9:55 IST
Last Updated 1 ನವೆಂಬರ್ 2024, 9:55 IST
<div class="paragraphs"><p>ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯಿಂದ ಗಸ್ತು</p></div>

ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೇನೆಯಿಂದ ಗಸ್ತು

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ಗಡಿ ಕುರಿತಂತೆ ಚೀನಾದೊಂದಿಗೆ ನಾಲ್ಕೂವರೆ ವರ್ಷಗಳ ಸಂಘರ್ಷದ ನಂತರ, ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಡೆಮ್‌ಚೋಕ್‌ ಪ್ರದೇಶದಲ್ಲಿ ಭಾರತೀಯ ಸೇನೆ ಶುಕ್ರವಾರ ಗಸ್ತು ಕಾರ್ಯ ಆರಂಭಿಸಿದೆ.

ADVERTISEMENT

ಡೆಪ್ಸಾಂಗ್‌ ಪ್ರದೇಶದಲ್ಲಿ ಶೀಘ್ರವೇ ಗಸ್ತು ಆರಂಭಿಸಲಾಗುವುದು ಎಂದು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇನೆ ವಾಪಸ್ ಕರೆಯಿಸಿಕೊಳ್ಳುವ ಸಂಬಂಧ ಉಭಯ ದೇಶಗಳ ನಡುವೆ ಇತ್ತೀಚೆಗೆ ಒಪ್ಪಂದ ಆಗಿತ್ತು. ಏಪ್ರಿಲ್‌ 2020ಕ್ಕೆ ಮುಂಚೆ ಇದ್ದ ಸಹಜ ಸ್ಥಿತಿಯನ್ನು ಮರಳಿಸುವುದು ಇದರ ಉದ್ದೇಶವಾಗಿತ್ತು. ಒಪ್ಪಂದದಂತೆ, ಚೀನಾ ಹಾಗೂ ಭಾರತೀಯ ಯೋಧರು ಶಸ್ತ್ರಾಸ್ತ್ರ, ಯುದ್ಧ ಸಲಕರಣೆಗಳೊಂದಿಗೆ ವಾಪಸ್‌ ಹೋಗಿದ್ದಾರೆ. ಸೇನೆ ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಗಸ್ತು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. 

ಉಭಯ ದೇಶಗಳ ಸೇನೆಗಳ ಸಮನ್ವಯದೊಂದಿಗೆ ಗಸ್ತು ನಡೆಯಲಿದೆ. ಅಂದರೆ, ತನ್ನ ಯೋಧರು ಎಲ್ಲೆಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂಬ ಬಗ್ಗೆ ಭಾರತೀಯ ಸೇನೆ ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯ (ಪಿಎಲ್‌ಎ) ಕಮಾಂಡರ್‌ಗೆ ಮಾಹಿತಿ ಒದಗಿಸಬೇಕು. ಅದೇ ರೀತಿ, ತನ್ನ ಸೈನಿಕ ಚಲನವಲನ ಕುರಿತು ಪಿಎಲ್‌ಎ, ಭಾರತೀಯ ಸೇನೆಗೆ ತಿಳಿಸಬೇಕು.

ಮೊದಲ ಹಂತದಲ್ಲಿ ಕಡಿಮೆ ಅಂತರದ ಗಡಿ ಠಾಣೆಗಳಲ್ಲಿ ಗಸ್ತು ಆರಂಭಿಸಬೇಕು. ನಂತರ, 2020ರಲ್ಲಿ ಸಂಘರ್ಷ ಆರಂಭಕ್ಕೂ ಮುನ್ನ ಯೋಧರು ನಿಯೋಜನೆಗೊಂಡಿದ್ದ ಸ್ಥಳಗಳಲ್ಲಿ ಪೂರ್ಣಪ್ರಮಾಣದ ಗಸ್ತು ಕೈಗೊಳ್ಳುವುದು ಸೇನೆಯ ಯೋಜನೆಯಾಗಿತ್ತು. ಆದರೆ, ಡೆಮ್‌ಚೋಕ್‌ನಲ್ಲಿ ಗಸ್ತು ಆರಂಭಗೊಂಡಿದ್ದರೂ ಈ ಕುರಿತು ಸೇನೆಯ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡಿಲ್ಲ.  

ಉಭಯ ದೇಶಗಳ ನಡುವೆ ಸಂಘರ್ಷ ಆರಂಭವಾದ ನಂತರ, ಡೆಮ್‌ಚೋಕ್‌ ವಲಯದಲ್ಲಿ ಎರಡು ಗಸ್ತು ಸ್ಥಳಗಳಿಗೆ ಸಂಪರ್ಕವನ್ನು ಪಿಎಲ್‌ಎ ಸ್ಥಗಿತಗೊಳಿಸಿತ್ತು. ಇನ್ನೊಂದೆಡೆ, ಡೆಪ್ಸಾಂಗ್‌ ಬಳಿ ಪಿಪಿ10, 11, 11ಎ, 12 ಹಾಗೂ 13ನೇ ಗಸ್ತು ಸ್ಥಳಗಳಿಗೆ ಭಾರತೀಯ ಯೋಧರು ಹೋಗಿರಲಿಲ್ಲ. ಈ ಗಸ್ತು ಸ್ಥಳಗಳು ವಾಸ್ತವ ನಿಯಂತ್ರಣ ರೇಖೆಗೆ (ಎಲ್‌ಎಸಿ) ಸಮೀಪದಲ್ಲಿವೆ.

ವಿಶೇಷ ಪಡೆಗಳ ರವಾನೆ: ಲಡಾಖ್‌ ಗಡಿಯಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಮಹತ್ವದ ಘಟ್ಟ ತಲುಪಿಸುವ ಹೊತ್ತಿನಲ್ಲಿಯೇ, ಯುದ್ಧ ಸಾಮರ್ಥ್ಯ ವೃದ್ಧಿಗಾಗಿ ಭಾರತ ತನ್ನ ವಿಶೇಷ ಪಡೆಗಳನ್ನು ಅಮೆರಿಕ ಹಾಗೂ ಇಂಡೊನೇಷ್ಯಾಕ್ಕೆ ಕಳುಹಿಸಿದೆ.

ಇಂಡೊನೇಷ್ಯಾ ರಾಜಧಾನಿ ಜಕಾರ್ತ ಬಳಿಯ ಸಿಜಾಂಟುಂಗ್‌ಗೆ ಒಂದು ಅರೆ ಸೇನಾ ಪಡೆ ತುಕಡಿಯನ್ನು ಕಳುಹಿಸಲಾಗಿದೆ. ಈ ತುಕಡಿಯು, ‘ಗರುಡ ಶಕ್ತಿ ತಾಲೀಮು’ ಅಡಿ ಇಂಡೊನೇಷ್ಯಾ ಸೇನೆಯೊಂದಿಗೆ ನ. 1ರಿಂದ 12ರ ವರೆಗೆ ಸಮರಾಭ್ಯಾಸ ನಡೆಸಲಿದೆ.

ಅಮೆರಿಕಕ್ಕೆ ಕಳುಹಿಸಲಾದ ಮತ್ತೊಂದು ತುಕಡಿಯು, ‘ವಜ್ರ ಪ್ರಹಾರ ತಾಲೀಮು’ ಅಡಿ, ಇಡಾಹೊನಲ್ಲಿರುವ ಆರ್ಚರ್ಡ್‌ ಯುದ್ಧ ತರಬೇತಿ ಕೇಂದ್ರದಲ್ಲಿ ನ. 2ರಿಂದ 22ರವರೆಗೆ ತಾಲೀಮು ನಡೆಸಲಿದೆ.

ಚೀನಾ ಯೋಧರೊಂದಿಗೆ ಮಾತುಕತೆ: ರಿಜಿಜು

ತವಾಂಗ್‌(ಅರುಣಾಚಲ ಪ್ರದೇಶ): ತವಾಂಗ್‌ ಸಮೀಪದ ಗಡಿಯಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಯೋಧರೊಂದಿಗೆ ಮಾತುಕತೆ ನಡೆಸಿದ್ದಾಗಿ ಕೇಂದ್ರ ಸಂಸದೀಯ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಶುಕ್ರವಾರ ಹೇಳಿದ್ದಾರೆ. ‘ಬುಮ್ಲಾದಲ್ಲಿರುವ ಸೇನೆ ಠಾಣೆಗೆ ಗುರುವಾರ ಭೇಟಿ ನೀಡಿ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಆಚರಿಸಿದೆ’ ಎಂದೂ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಕುರಿತ ವಿಡಿಯೊಯೊಂದನ್ನು ಅವರು ಹಂಚಿಕೊಂಡಿದ್ದಾರೆ. ‘15 ಸಾವಿರ ಅಡಿಗಳಷ್ಟು ಎತ್ತರದ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ನೀವು ಹೇಗೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೀರಿ’ ಎಂಬುದಾಗಿ ರಿಜಿಜು ಅವರು ಚೀನಾ ಯೋಧರನ್ನು ಪ್ರಶ್ನಿಸುತ್ತಿರುವುದು ಹಾಗೂ ದುಭಾಷಿಯೊಬ್ಬರ ನೆರವಿನಿಂದ ಅವರ ಉತ್ತರ ಆಲಿಸುತ್ತಿರುವುದು ವಿಡಿಯೊದಲ್ಲಿದೆ. ‘ಇಂತಹ ಎತ್ತರದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆ ನಮಗೆ ಸಮಸ್ಯೆಯೇನಲ್ಲ’ ಎಂಬುದಾಗಿ ಚೀನಾ ಸೈನಿಕರು ಉತ್ತರಿಸಿದ್ದಾರೆ. ಗಡಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯಗಳ ಅಭಿವೃದ್ಧಿ ಬಗ್ಗೆಯೂ ರಿಜಿಜು ಪ್ರಸ್ತಾಪಿಸಿದ್ದು ಚೀನಾ ಸೈನಿಕರೊಂದಿಗೆ ಮಾತುಕತೆ ನಡೆಸಿದ ಬಳಿಕ ಹಾಗೂ ಗಡಿಯಲ್ಲಿನ ಮೂಲಸೌಕರ್ಯಗಳನ್ನು ವೀಕ್ಷಿಸಿದಾಗ ಗಡಿಗಳ ಅಭಿವೃದ್ಧಿ ವಿಷಯದಲ್ಲಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಮೂಡುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.