ನವದೆಹಲಿ: ಭಾನುವಾರ ಮುಂಜಾನೆ ಭಾರತೀಯ ಸೇನೆಯ ಮುಂಚೂಣಿ ನೆಲೆಗಳ ಪಾಕಿಸ್ತಾನದ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು,ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಈ ಪ್ರತಿದಾಳಿಯಲ್ಲಿ ಭಾರತೀಯ ಸೇನೆ ಪಾಕ್ಉಗ್ರರ ನೆಲೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವಂಸ ಮಾಡಿದೆ. ಪ್ರತಿದಾಳಿಯಲ್ಲಿ ಸುಮಾರು 6ರಿಂದ 10 ಪಾಕ್ ಸೈನಿಕರು ಮತ್ತು ಹಲವಾರು ಉಗ್ರರು ಹತರಾಗಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಗಡಿನಿಯಂತ್ರಣ ರೇಖೆಯ ತಂಗ್ಧರ್ ವಲಯದಲ್ಲಿಭಾರತದ ಗಡಿಯೊಳಗೆ ಉಗ್ರರು ನುಸುಳುವುದಕ್ಕೆ ಸಹಾಯ ಮಾಡಲು ಪಾಕ್ ಸೇನೆ ಶನಿವಾರ ಸಂಜೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಉಗ್ರರು ಗಡಿಯೊಳಗೆ ನುಸುಳಲು ಯತ್ನಿಸುತ್ತಿದಂತೆ ಭಾರತೀಯ ಸೇನೆ ಉಗ್ರರ ನೆಲೆಯನ್ನು ಧ್ವಂಸ ಮಾಡಿತು ಎಂದು ರಾವತ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರತಿದಾಳಿಯಲ್ಲಿ ತಂಗ್ದರ್ ವಲಯದಲ್ಲಿರುವ ಉಗ್ರ ಶಿಬಿರಗಳು ಧ್ವಂಸವಾಗಿವೆ. ಇಲ್ಲಿ 6ರಿಂದ 10 ಪಾಕ್ ಸೈನಿಕರು ಹತ್ಯೆಯಾಗಿದ್ದಾರೆ. ಮೂರು ಶಿಬಿರಗಳು ನಾಶವಾಗಿವೆ. ಅಷ್ಟೇ ಉಗ್ರರು ಹತ್ಯೆಗೀಡಾಗಿದ್ದಾರೆ ಎಂದು ವರದಿ ಲಭಿಸಿರುವುದಾಗಿ ರಾವತ್ ಹೇಳಿದ್ದಾರೆ.
ಆದಾಗ್ಯೂ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಶಿಬಿರಗಳನ್ನು ಭಾರತೀಯ ಸೇನೆ ನಾಶ ಮಾಡಿದೆ ಎಂಬ ವರದಿಯನ್ನು ಪಾಕ್ ತಳ್ಳಿಹಾಕಿದೆ. ಭಾರತದ ಸುಳ್ಳನ್ನು ಜಗಜ್ಜಾಹೀರು ಮಾಡುವುದಕ್ಕಾಗಿ ನಾವು ಪಿ5 ದೇಶಗಳನ್ನು (ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್, ಅಮೆರಿಕ)ದ ಪ್ರತಿನಿಧಿಗಳನ್ನು ದಾಳಿ ನಡೆದಿದೆ ಎನ್ನಲಾಗುವ ಪ್ರದೇಶಕ್ಕೆ ಕರೆತರುತ್ತೇವೆ ಎಂದು ಪಾಕ್ ಹೇಳಿದೆ.
ಉಗ್ರರ ಶಿಬಿರಗಳ ಮೇಲೆ ದಾಳಿ ನಡೆದಿದೆ ಎಂದು ಭಾರತೀಯ ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ದಾರೆ.
ಏತನ್ಮಧ್ಯೆ, ಜುರಾ, ಶಹಕೋಟ್ , ನೌಸೆಹರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಐವರು ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಆರೋಪಿಸಿರುವ ಪಾಕ್ ಭಾರತೀಯ ರಾಯಭಾರಿ ಗೌರವ್ ಅಹ್ಲುವಾಲಿಯಾಗೆ ಸಮನ್ಸ್ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.