ನವದೆಹಲಿ: ‘ಪೂರ್ವ ಲಡಾಖ್ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು (ಪಿಎಲ್‌ಎ) ಎದುರಿಸಲು ಭಾರತೀಯ ಯೋಧರು ದೃಢನಿಶ್ಚಯದಿಂದ ಹೋರಾಡುವರು. ಯಾವುದೇ ಸಂದರ್ಭ ಎದುರಿಸಲು ಗರಿಷ್ಠ ಮಟ್ಟದ ಸನ್ನದ್ಧತೆ ಹೊಂದಲಾಗಿದೆ’ ಎಂದು ಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಬುಧವಾರ ಹೇಳಿದರು.
ಮುಂಬರುವ ‘ಸೇನೆ ದಿನ’ದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಡಿಯಲ್ಲಿನ ಸಂಘರ್ಷ ಭಾಗಶಃ ಶಮನವಾಗಿದ್ದರೂ, ಅಪಾಯ ಇನ್ನೂ ಕಡಿಮೆಯಾಗಿಲ್ಲ’ ಎಂದರು.
‘ಬಿಕ್ಕಟ್ಟು ಶಮನ ಮಾಡುವ ನಿಟ್ಟಿನಲ್ಲಿ ಒಂದೆಡೆ ಚೀನಾ ಸೇನೆಯೊಂದಿಗೆ ಮಾತುಕತೆಯನ್ನು ಮುಂದುವರಿಸಲಾಗುತ್ತಿದೆ. ಇನ್ನೊಂದೆಡೆ ಯುದ್ಧ ಸನ್ನದ್ಧತೆಗೆ ಗಮನ ನೀಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಗಡಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಮುಂದಾಗಿದ್ದ ಚೀನಾ ಸೇನೆಗೆ ಭಾರತೀಯ ಯೋಧರು ಅತ್ಯಂತ ದಿಟ್ಟ ಪ್ರತ್ಯುತ್ತರ ನೀಡಿದರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇಶದ ಉತ್ತರದ ಗಡಿಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಮೇಲ್ದರ್ಜೆಗೇರಿಸಲು ಕೈಗೊಂಡ ಕ್ರಮಗಳ ಕುರಿತು ಪ್ರಸ್ತಾಪಿಸಿದ ಅವರು, ‘ಈ ವಿಷಯದಲ್ಲಿ ಸಮಗ್ರವಾದ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ‘ ಎಂದರು.
****
ಡಿ. 4ರಂದು ನಾಗಾಲ್ಯಾಂಡ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸೇನೆ ನಡೆಸುತ್ತಿರುವ ತನಿಖೆಯ ವರದಿ ಒಂದೆರಡು ದಿನಗಳಲ್ಲಿ ಕೈಸೇರಲಿದೆ
ಜನರಲ್ ಎಂ.ಎಂ.ನರವಣೆ, ಸೇನೆ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.