ADVERTISEMENT

ಭಾರತೀಯ ಸೇನೆಗೆ 120 ‘ನಾಗಾಸ್ತ್ರ’ ಡ್ರೋನ್‌ಗಳ ಸೇರ್ಪಡೆ: ಶತ್ರುಗಳು ಧೂಳೀಪಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2024, 7:57 IST
Last Updated 16 ಜೂನ್ 2024, 7:57 IST
Venugopala K.
   Venugopala K.

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಮೂಲದ ಸೋಲಾರ್ ಪರಿಕರಗಳ ಕಂಪನಿಯೊಂದು ತಯಾರಿಸಿರುವ ಸ್ವದೇಶಿ ನಿರ್ಮಿತ ನಾಗಾಸ್ತ್ರ–1 ಕಾಮಿಕಾಜೆ ಡ್ರೋನ್‌ಗಳನ್ನು ಇಂದು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲಾಗಿದೆ.

ಸ್ವದೇಶಿ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆಯು 480 ಲೋಯಿಟರ್ ಮುನಿಷನ್‌ಗಳನ್ನು(ಕಾಮಿಕಾಜೆ ಅಥವಾ ಆತ್ಮಹತ್ಯಾ ಡ್ರೋನ್) ಒದಗಿಸಲು ನಾಗ್ಪುರದ ಎಕನಾಮಿಕ್ಸ್ ಎಕ್ಸ್‌ಪ್ಲೋಸಿವ್ ಲಿಮಿಟೇಡ್‌ಗೆ(ಇಇಸಿ) ಆರ್ಡರ್ ನೀಡಿತ್ತು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮೇ 20ರಿಂದ 25ರ ನಡುವೆ ಪ್ರೀ ಡೆಲಿವರಿ ತಪಾಸಣೆ ಮುಗಿದ ಬಳಿಕ ಸಂಸ್ಥೆಯು ಮೊದಲ ಬ್ಯಾಚ್‌ನಲ್ಲಿ 120 ಡ್ರೋನ್‌ಗಳನ್ನು ಸೇನೆಯ ಪುಲ್ಗಾಂವ್‌ನ ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ತಲುಪಿಸಿದೆ.

ADVERTISEMENT

ನಾಗಾಸ್ತ್ರ-1, ಡ್ರೋನ್ ‘ಕಾಮಿಕಾಜೆ ಮೋಡ್’ನಲ್ಲಿ ಕಾರ್ಯನಿರ್ವಹಿಸುತ್ತದೆ. ಜಿಪಿಎಸ್ ಮೂಲಕ ನಿಖರವಾಗಿ ಗುರಿಗಳನ್ನು ಮುಟ್ಟುವ ಮೂಲಕ ಶತ್ರುಗಳನ್ನು ನಾಶಪಡಿಸುವ ಸಾಮರ್ಥ್ಯಹೊಂದಿದೆ, 9 ಕೆ.ಜಿಗಳಷ್ಟು ತೂಕವಿದೆ. ಹಗಲು– ರಾತ್ರಿಯ ಕಣ್ಗಾವಲು ಕ್ಯಾಮೆರಾ, 1ಕೆ.ಜಿಯಷ್ಟು ಸ್ಫೋಟಕ ಸಾಮರ್ಥ್ಯದ ಸಿಡಿತಲೆ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ಡ್ರೋನ್‌ನಲ್ಲಿ ಅಳವಡಿಸಲಾಗಿದೆ.

ಎಕನಾಮಿಕ್ಸ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (ಇಇಎಲ್) ಸಂಸ್ಥೆಯು ಬೆಂಗಳೂರಿನ ಝೆಡ್‌-ಮೋಷನ್ ಅಟಾನಮಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಾಗಾಸ್ತ್ರ-1 ಅನ್ನು ಅಭಿವೃದ್ಧಿಪಡಿಸಿದೆ. ಶೇಕಡಾ 75ಕ್ಕಿಂತ ಹೆಚ್ಚು ದೇಶೀಯ ಪರಿಕರಗಳನ್ನು ಬಳಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.