ನವದೆಹಲಿ: ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹಿಡಿದು ಹೊಸ ವರ್ಷಾಚರಣೆ ನಡೆಸಿರುವ ಭಾರತೀಯ ಸೇನಾ ಪಡೆಗಳ ಚಿತ್ರಗಳು ಮಂಗಳವಾರ ಬಿಡುಗಡೆಯಾಗಿವೆ.
ಕೇಂದ್ರದ ಕಾನೂನು ಸಚಿವ ಕಿರಣ್ ರಿಜಿಜು ಸಹ ಸೇನಾ ಪಡೆಯ ಸಂಭ್ರಮಾಚರಣೆಯ ಚಿತ್ರಗಳನ್ನು ಟ್ವೀಟಿಸಿದ್ದು, 'ಹೊಸ ವರ್ಷದ ಪ್ರಯುಕ್ತ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯ ವೀರ ಯೋಧರು' ಎಂದು ಪ್ರಕಟಿಸಿದ್ದಾರೆ.
ಗಾಲ್ವಾನ್ ಕಣಿವೆ ಭಾಗದ ಸಮೀಪದಲ್ಲಿ ಚೀನಾ ಯೋಧರು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಿರುವ ವಿಡಿಯೊ ಅನ್ನು ಚೀನಾದ ಸರ್ಕಾರಿ ಮಾಧ್ಯಮ ಮೂರು ದಿನಗಳ ಹಿಂದೆ ಪ್ರಸಾರ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಭಾರತದ ಯೋಧರ ಚಿತ್ರಗಳು ಹರಿದಾಡುತ್ತಿವೆ.
ರಾಷ್ಟ್ರ ಧ್ವಜದ ಜೊತೆಗೆ ಸುಮಾರು 30 ಭಾರತೀಯ ಯೋಧರು ಇರುವುದನ್ನು ಚಿತ್ರವೊಂದರಲ್ಲಿ ಕಾಣಬಹುದಾಗಿದೆ.
ಮೂಲಗಳ ಪ್ರಕಾರ, ಈ ಚಿತ್ರಗಳು ಜನವರಿ 1ರಂದು ಗಾಲ್ವಾನ್ ಕಣಿವೆಯಲ್ಲಿ ತೆಗೆದಿರುವ ಚಿತ್ರಗಳಾಗಿವೆ.
ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ದೀರ್ಘ ಜಟಾಪಟಿಯ ನಡುವೆಯೂ ಜನವರಿ 1ರಂದು ಉಭಯ ರಾಷ್ಟ್ರಗಳ ಸೇನಾ ಪಡೆಗಳು ಸಿಹಿ ಹಾಗೂ ಶುಭಾಶಯ ಪತ್ರಗಳನ್ನು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) 10 ಗಡಿ ಭಾಗಗಳಲ್ಲಿ ವಿನಿಮಯ ಮಾಡಿಕೊಂಡಿವೆ.
ಪೂರ್ವ ಲಡಾಖ್ ಗಡಿಯ ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಡುವೆ 2020ರ ಮೇ 5ರಂದು ಘರ್ಷಣೆ ನಡೆದಿತ್ತು. ಅದರ ಬೆನ್ನಲ್ಲೇ ಉಭಯ ರಾಷ್ಟ್ರಗಳು ಸಾವಿರಾರು ಯೋಧರು ಹಾಗೂ ಶಸ್ತ್ರಾಸ್ತ್ರಗಳನ್ನು ಸ್ಥಳದಲ್ಲಿ ನಿಯೋಜಿಸಿದ್ದವು. ಹಲವು ಸುತ್ತಿನ ಮಾತುಕತೆಗಳ ನಂತರ ಉಭಯ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ನಡೆದಿದ್ದರೂ, ಪ್ರಸ್ತುತ ಎರಡೂ ದೇಶಗಳು 50,000ದಿಂದ 60,000 ಸೇನಾ ಪಡೆಗಳನ್ನು ಎಲ್‌ಎಸಿಯ ಉದ್ದಕ್ಕೂ ನಿಯೋಜಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.